ಕರ್ನಾಟಕ

ಸರ್ಕಾರ ಉಳಿಸಲು ರಾಮಲಿಂಗಾ ರೆಡ್ಡಿ ಹಿಂದೆ ಬಿದ್ದ ಕಾಂಗ್ರೆಸ್​​​-ಜೆಡಿಎಸ್​​​ ನಾಯಕರು

Pinterest LinkedIn Tumblr


ಬೆಂಗಳೂರು(ಜುಲೈ.14): ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಉಳಿಸಲು ದೋಸ್ತಿ ನಾಯಕರು ಕೊನೆ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಪ್ರಯತ್ನಕ್ಕೆ ಸಿಎಂ ಎಚ್​​.ಡಿ ಕುಮಾರಸ್ವಾಮಿ ಸೇರಿದಂತೆ ಸಚಿವ ಡಿ.ಕೆ ಶಿವಕುಮಾರ್​​, ಡಿಸಿಎಂ ಪರಮೇಶ್ವರ್​​ ಮುಂದಾಗಿದ್ದಾರೆ.

ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಎಚ್.ಕೆ.ಪಾಟೀಲ್, ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತೆ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದ್ದೇವೆ. ಅಲ್ಲದೇ ನಮ್ಮ ಮನವಿಗೆ ಒಪ್ಪುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಿಗೆ ಕಾಳಜಿ ಇದೆ. ನಮ್ಮ ಕಾರ್ಯಕರ್ತರು ಕೂಡ ರಾಜೀನಾಮೆ ವಾಪಸ್​​ ಪಡೆಯಬೇಕೆಂದು ಆಶಿಸುತ್ತಿದ್ದಾರೆ. ನಮ್ಮ ಮನವಿಯನ್ನು ತಿರಸ್ಕರಿಸುವುದಿಲ್ಲ ಎಂಬ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿ ಕೈ ಹಿಡಿಯಲಿದ್ದಾರೆ ಎಂದು ಭಾವಿಸಿದ್ದೇವೆ. ರಾಮಲಿಂಗಾ ರೆಡ್ಡಿ ಅವರು ಮನಸ್ಸು ಮಾಡಿದರೇ, ಸರ್ಕಾರ ಉಳಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಕಾಂಗ್ರೆಸ್​​ಗೆ ಅವರ ಅವಶ್ಯಕತೆ ತುಂಬಾ ಇದೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದೇವೆ. ಮುಂದೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ಈಶ್ವರ್​​ ಖಂಡ್ರೆ.

ಅಪರೇಷನ್ ಕಮಲದ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿ, ರಾಜೀನಾಮೆ ಕೊಡಿಸಿದ್ದಾರೆ. ಬಿಜೆಪಿಯವರ ಈ ನಡೆ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ಹಾಳು ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಕೋಟಿಗಟ್ಟಲೇ ಹಣ ಕೊಟ್ಟು ಸೆಳೆಯುವಂತಹ ಅಗತ್ಯವಾದರು ಏನಿತ್ತು. ಇಂತವರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್​​ ನಾಯಕರು ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದಾರೆ.

ಅಂತೆಯೇ ಸಮಿಶ್ರ ಸರಕಾರ ಉಳಿಯಲಿದೆ ಎಂಬ ವಿಶ್ವಾಸವಿದೆ. ನಮ್ಮ ಶಾಸಕರು ನಮ್ಮನ್ನು ಕೈಬಿಡುವುದಿಲ್ಲವೆಂಬ ಬಲವಾದ ನಂಬಿಕೆ ಇದೆ. ಆದರೂ ಬಿಜೆಪಿಯ ಅಧಿಕಾರದ ವ್ಯಾಮೋಹ ರಾಜ್ಯದಲ್ಲಿ ಅತಂತ್ರ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಅವರು ದೂರುತ್ತಿದ್ಧಾರೆ.

Comments are closed.