
ಪಣಜಿ: ಕರ್ನಾಟಕದಲ್ಲಿ ಮೈತ್ರಿಪಕ್ಷಗಳ ಶಾಸಕರು ಸಾಲುಸಾಲಾಗಿ ರಾಜೀನಾಮೆ ನೀಡುತ್ತಿರುವಂತೆಯೇ ನೆರೆಯ ಗೋವಾದಲ್ಲೂ ಕ್ಷಿಪ್ರ ರಾಜಕೀಯ ನಡೆಗಳಾಗುತ್ತಿವೆ. ಗೋವಾದ ವಿಪಕ್ಷ ಕಾಂಗ್ರೆಸ್ನಿಂದ ಒಂದು ಬಣ ಸಿಡಿದೆದ್ದು ಬಿಜೆಪಿಗೆ ವಿಲೀನವಾಗುತ್ತಿದೆ. ಕಾಂಗ್ರೆಸ್ನ 15 ಶಾಸಕರ ಪೈಕಿ 10 ಮಂದಿಯ ಗುಂಪು ಬಿಜೆಪಿಯೊಂದಿಗೆ ಸೇರಲು ನಿರ್ಧರಿಸಿದೆ.
ವಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ ಕಾಂಗ್ರೆಸ್ನ 10 ಮಂದಿ ಬಣವು ಬುಧವಾರ ಸಂಜೆಯ ನಂತರ ಸ್ಪೀಕರ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್ನಿಂದ ಹೊರಬರುತ್ತಿರುವುದಾಗಿ ಸ್ಪೀಕರ್ ರಾಜೇಶ್ ಪಾಟ್ನೇಕರ್ ಅವರಿಗೆ ಪತ್ರವನ್ನು ನೀಡಿದೆ. ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್ನಿಂದ ಒಡೆದು ಬಂದು ಬಣದ ಸದಸ್ಯರಾಗಿದ್ದಾರೆ.
ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾರೆ. ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 17 ಶಾಸಕರನ್ನ ಹೊಂದಿದೆ. ಗೋವಾ ಫಾರ್ವರ್ಡ್ ಪಾರ್ಟಿಯ 3 ಮತ್ತು ಪಕ್ಷೇತರರು ಸೇರಿ ಒಟ್ಟು 6 ಶಾಸಕರ ಬೆಂಬಲದೊಂದಿಗೆ ಅಧಿಕಾರ ರಚನೆ ಮಾಡಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಮತ್ತು ಎನ್ಸಿಪಿ ತಲಾ 1 ಸ್ಥಾನದೊಂದಿಗೆ ಕಾಂಗ್ರೆಸ್ ಜೊತೆ ವಿರೋಧ ಪಕ್ಷದ ಸಾಲಿನಲ್ಲಿವೆ. ಈಗ ಕಾಂಗ್ರೆಸ್ನೊಂದಿಗೆ ಒಂದು ಬಣ ಸಿಡಿದೇಳುವುದರೊಂದಿಗೆ ಬಿಜೆಪಿ ನೇತೃತ್ವದ ಮೈತ್ರಿಸರ್ಕಾರದ ಸಂಖ್ಯೆ 33 ತಲುಪುವ ಸಾಧ್ಯತೆ ಇದೆ.
ಇನ್ನು, ಮೂರನೇ ಎರಡು ಭಾಗದಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿರುವುದರಿಂದ ಅವರ ಶಾಸಕ ಸ್ಥಾನ ರದ್ದಾಗುವುದಿಲ್ಲ. ಕಾಂಗ್ರೆಸ್ನ ಪ್ರತ್ಯೇಕ ಬಣವೆಂದು ಪರಿಗಣಿಸಲಾಗುತ್ತದೆ. ಆ ಬಣವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಯಾವುದೇ ಕಾನೂನು ಅಡ್ಡಿ ಇರುವುದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಭಾರೀ ನಿರಾಸೆ ಅನುಭವಿಸಿದ ಕಾಂಗ್ರೆಸ್ ಪಕ್ಷ ಆ ಬಳಿಕ ದೇಶಾದ್ಯಂತ ಇನ್ನಷ್ಟು ಕುಸಿತ ಕಾಣುತ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅಲುಗಾಡುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಒಟ್ಟು 16 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿಯು ಆಡಳಿತಾರೂಡ ಟಿಆರ್ಎಸ್ ಪಕ್ಷಕ್ಕೆ ವಲಸೆ ಹೋಗಿದ್ದರು. ರಾಹುಲ್ ಗಾಂಧಿ ರಾಜೀನಾಮೆ ನಂತರ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಲೇ ಹೋಗುತ್ತಿರುವಂತಿದೆ.
Comments are closed.