
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ರಾಜೀನಾಮೆ ನೀಡಿದ ಬಳಿಕ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಸುಧಾಕರ್ನ್ನ ಎಳೆದಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜೀನಾಮೆ ನೀಡಿ ಮುಂದೆ ಬಂದಾಗ ಸುಧಾಕರ್ ರನ್ನು ಎಳೆದು ಕೂಡಿಹಾಕಿ ಗೂಂಡಾಗಿರಿ ಮಾಡಿದ್ದಾರೆ. ಪ್ರಜಾಪ್ರಭುತ್ವ ಇಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆ. ಕುಮಾರಸ್ವಾಮಿ ರಾಜೀನಾಮೆ ಬಿಸಾಕಿರುತ್ತಿದ್ದರೆ ಇಂತಹ ಘಟನೆ ತಡೆಯಬಹುದಾಗಿತ್ತು. ಸ್ಪೀಕರ್ ನಗುತ್ತಾ ತನಗೆ ಸಂಬಂಧ ಇಲ್ಲ ಎಂದು ಹೋದರೆ ರಕ್ಷಣೆ ಕೊಡೋರು ಯಾರು ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದ್ದಾರೆ.
ಕೂಡಲೇ ಸುಧಾಕರ್ರನ್ನು ಬಿಡುಗಡೆ ಮಾಡಬೇಕು. ಪೊಲೀಸರು ಸುಧಾಕರ್ಗೆ ರಕ್ಷಣೆ ಒದಗಿಸಬೇಕು. ಬೇರೆ ಯಾವ ರಾಜ್ಯದಲ್ಲೂ ನಡೆಯದ ರೀತಿ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸುಧಾಕರ್ ಪತ್ನಿ ಈಗತಾನೇ ಕರೆ ಮಾಡಿ, ನನ್ನ ಪತಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ನಾನು ಪೊಲೀಸ್ ಆಯುಕ್ತರು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ ತಕ್ಷಣ ಸುಧಾಕರ್ಗೆ ರಕ್ಷಣೆ ಕೊಡಬೇಕು. ಅವರು ರಾಜಭವನಕ್ಕೆ ಬರಲು ಅವಕಾಶ ಮಾಡಿಕೊಡಬೇಕು.
ಗೂಂಡಾಗಿರಿಗೂ ಒಂದು ಮಿತಿ ಇರುತ್ತದೆ. ಸಚಿವ ಪ್ರಿಯಾಂಕ ಖರ್ಗೆ,ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ಅವರೇ ಮ್ಯಾನ್ ಹ್ಯಾಂಡಲ್ ಮಾಡಿದ್ದಾರೆ. ಶಾಸಕರು ರಾಜೀನಾಮೆ ಕೊಡುತ್ತಿದ್ದಂತೆಯೇ ಸರ್ಕಾರ ಬಹುಮತ ಕಳೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
Comments are closed.