
ನವದೆಹಲಿ(ಜೂನ್.29): ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ನಿರಾಕರಿಸಿದ ಮುಸ್ಲಿಂ ಯುವಕನ ಮೇಲೆ ಖಾನ್ಪುರದಲ್ಲಿ ಹಲ್ಲೆ ನಡೆಸಲಾಗಿದೆ. ಕೇಸರಿ ವಸ್ತ್ರ ಧರಿಸಿದ್ದ ಅಪರಿಚಿತರ ಗುಂಪೊಂದು 16 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ಧಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಹಮ್ಮದ್ ತಾಜ್ ಎಂಬುವರು ಕಿದ್ವಾಯ್ ನಗರದಿಂದ ನಮಾಜ್ ಮುಗಿಸಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುಸ್ಲಿಂ ಯುವಕ ತಾಜ್ ಬಳಿಗೆ ಬೈಕಿನಲ್ಲಿ ಬಂದ ನಾಲ್ವರ ಗುಂಪೊಂದು, ಮೊದಲಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ತಾಖೀತು ಮಾಡಿದೆ. ಅಲ್ಲದೇ ಕೇಸರಿ ವಸ್ತ್ರ ಧರಿಸುವಂತೆ ಬೆದರಿಕೆ ಹಾಕಿದೆ. ಇದನ್ನು ನಿರಾಕರಿಸಿದ್ದಕ್ಕೆ ಯುವಕನನ್ನು ಥಳಿಸಲಾಗಿದೆ ಎಂದು ಪಿಟಿಯ ವರದಿ ಮಾಡಿದೆ.
ಸದ್ಯ ಖಾನ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳ ಗುಂಪಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಇತ್ತೀಗಷ್ಟೇ ಜಾರ್ಖಂಡ್ ನಲ್ಲಿ 22 ವರ್ಷದ ಯುವಕ ತಬ್ರೆಜ್ ಅನ್ಸಾರಿಯನ್ನು ಯುವಕರ ಗುಂಪು ಒತ್ತಾಯಪೂರ್ವಕವಾಗಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.
ಜಾರ್ಖಾಂಡ್ ಬೆನ್ನಲ್ಲೇ ಇಂಥಹ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಜೈ ಶ್ರೀರಾಮ್ ಎಂದು ಹೇಳದ್ದಕ್ಕೆ ಗುಂಪೊಂದು ಮದರಸಾ ಶಿಕ್ಷಕನನ್ನು ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ್ಧಾರೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮದರಸಾ ಶಿಕ್ಷಕನಾಗಿದ್ದ ಹಫೀಜ್ ಮೊಹಮ್ಮದ್ ಶಾರುಕ್ ಹಲ್ದಾರ್ ಎಂಬ 26 ವರ್ಷದ ಮುಸ್ಲಿಂ ವ್ಯಕ್ತಿ ಕನ್ನಿಂಗ್ನಿಂದ ಹೂಗ್ಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ನಾಲ್ಕೈದು ಜನರ ಗುಂಪು ಶಿಕ್ಷಕನಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಅವರನ್ನು ಥಳಿಸಿ ರೈಲಿನಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ.
Comments are closed.