ಕ್ರೀಡೆ

ಫಿಟ್ನೆಸ್​ ಸಮಸ್ಯೆ, ಕೌಟುಂಬಿಕ ಕಲಹ ಎಲ್ಲವನ್ನು ಮೆಟ್ಟಿನಿಂತ ಕ್ರಿಕೆಟಿಗ ಶಮಿ!

Pinterest LinkedIn Tumblr


ಬೆಂಗಳೂರು (ಜೂ. 29): ವಿಶ್ವಕಪ್​​ನಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಮಿಂಚುತ್ತಿರುವ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನ ಮುಂದುವರಿಸಿದೆ. ಅದರಲ್ಲೂ ಕಳೆದೆರಡು ಪಂದ್ಯದಲ್ಲಂತೂ ಬೌಲರ್​ ಮೊಹಮ್ಮದ್​ ಶಮಿ ಘರ್ಜಿಸುತ್ತಿದ್ದಾರೆ.

ಟೀಂ ಇಂಡಿಯಾದ 15ರ ಬಳಗದಲ್ಲಿ ಅವಕಾಶ ಪಡೆದರೂ, ಮೊದಲ 4 ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಶಮಿ ಅಬ್ಬರಿದಲು ಕಾದು ಕುಳಿತಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತದಿಂದ ಹೊರಬಿದ್ದ ಬಳಿಕ ಶಮಿ ಪ್ಲೇಯಿಂಗ್ ಇಲೆವೆನ್ ಅವಕಾಶ ಪಡೆದರು. ಆ ನಂತರ ನಡೆದಿದ್ದೆಲ್ಲಾ ಇದೀಗ ಇತಿಹಾಸ.

ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗಳಲ್ಲಿ ಆಯೋಜಿಸಲಾಗಿದ್ದ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಶಮಿ ತಂಡದ ಪ್ರಮುಖ ಸದಸ್ಯರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದರು. ಉಮೇಶ್ ಯಾದವ್​​​ ಹಾಗೂ ಮೋಹಿತ್ ಶರ್ಮಾ ಅವರೊಂದಿಗೆ ಭಾರತದ ವೇಗದ ಬೌಲಿಂಗ್ ಮುಂಚೂಣಿಯಲ್ಲಿದ್ದವರು ಶಮಿ. ಈ ಜೋಡಿಯ ಕರಾರುವಾಕ್ ಬೌಲಿಂಗ್‌ನಿಂದ ಆಗಿನ ವಿಶ್ವಕಪ್ ಲೀಗ್ ಹಂತದಲ್ಲಿ ಏಳು ಎದುರಾಳಿಗಳನ್ನು ಸೋಲಿಸಿ ಭಾರತ ಸೆಮಿ ಫೈನಲ್ ಪ್ರವೇಶಿಸಿತ್ತು.

ಪರ್ತ್‌ನಲ್ಲಿ ಭಾರತ ಯುಎಇ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಪಂದ್ಯದಲ್ಲಿ ಮಾತ್ರ ಬೆನ್ನುನೋವಿನ ಕಾರಣದಿಂದ ಶಮಿ ಆಡಿರಲಿಲ್ಲ. ಆದರೂ 7 ಪಂದ್ಯಗಳಿಂದ ಒಟ್ಟು 17 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ವಿಶ್ವಕಪ್​ನಲ್ಲಿ ಉತ್ತಮ ಆಟವಾಡಿದ್ದ ಶಮಿ ಗಾಯ ಹಾಗೂ ಫಿಟ್ನೆಸ್ ಸಮಸ್ಯೆಗಳು ವಿಶ್ವಕಪ್ ತಯಾರಿಗೆ ಸಾಕಷ್ಟು ಅಡ್ಡಿ ಉಂಟು ಮಾಡಿದ್ದವು. ಇದಕ್ಕೂ ಮುನ್ನ ಮೊಣಕಾಲು ಸರ್ಜರಿಯ ಕಾರಣದಿಂದ ಸುಮಾರು ಒಂದೂವರೆ ವರ್ಷ ಕ್ರಿಕೆಟ್‌ನಿಂದ ದೂರವಿರಬೇಕಾಯಿತು. ಕಳೆದ ವರ್ಷದ ಮಧ್ಯದಲ್ಲಿ ಇವರು ಯೋ ಯೋ ಪರೀಕ್ಷೆಯಲ್ಲಿ ವಿಫಲರಾದ ನಂತರ ಟೀಂ ಇಂಡಿಯಾದಿಂದಲೇ ಹೊರಬಿದ್ದರು.

ಬಳಿಕ ಗಂಭೀರವಾಗಿ ತಮ್ಮನ್ನು ತಾವು ಸುಧಾರಿಸಿಕೊಳ್ಳುವತ್ತ ಗಮನಹರಿಸಿದ ಶಮಿ ಫಿಟ್ನೆಸ್ ಹೊಂದಿ ಸಾಕಷ್ಟು ತೆಳ್ಳಗಾದರು. ಹೀಗೆ ಫಿಟ್ನೆಸ್ ಕಾಯ್ದುಕೊಂಡು ಯೋ ಯೋ ಟೆಸ್ಟ್​ ಪಾಸ್ ಮಾಡಿದ್ದಲ್ಲದೆ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ ಶಮಿ ವಿಶ್ವಕಪ್​ನಲ್ಲಿ 3ನೇ ಬೌಲರ್​​ ಆಗಿ ಆಯ್ಕೆಯಾದರು.

ತಾನಾಡಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಶಮಿ ವಿಶ್ವಕಪ್​ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದರು. ಅಲ್ಲದೆ ಚೇತನ್​ ಶರ್ಮಾ ಬಳಿಕ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್ ಎಂಬ ಕೀರ್ತಿಗೂ ಪಾತ್ರರಾದರು.

ಶಮಿ ಅವರ ಬೆಂಕಿಯ ಆಟ ಕಳೆದ ವಿಂಡೀಸ್ ಮ್ಯಾಚ್​ನಲ್ಲೂ ನಡೆಯಿತು. ಓಲ್ಡ್ ಟ್ರಾಫರ್ಡ್‌ನಲ್ಲಿ ವಿಂಡೀಸ್ ವಿರುದ್ಧ ಅವರ ಬೌಲಿಂಗ್ ನಿಖರತೆ ಎಂಥವರನ್ನೂ ದಂಗುಬಡಿಸುವಂತಿತ್ತು. ಚೆಂಡಿನ ಸೀಮ್ ಹಿಡಿಯುವ ಶೈಲಿ, ಸ್ವಿಂಗ್ ಕೈಚಳಕಗಳು ಅದ್ವಿತೀಯವಾಗಿದ್ದವು. ಈ ಪಂದ್ಯದಲ್ಲಿ 6.2 ಓವರಗಳಲ್ಲಿ 16 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿದ್ದು ಶಮಿ ಅವರ ಅದ್ಭುತ ಫಾರ್ಮಗೆ ಸಾಕ್ಷಿಯಾಗಿದೆ.

ಶಮಿಯ ಈ ಅತ್ಯುತ್ತಮ ಪ್ರದರ್ಶನ ನೋಡಿದ ಕ್ರಿಕೆಟ್ ಪಂಡಿತರು ಇದು ಶಮಿಯ ಹೊಸ ಅವತಾರ. ಶಮಿ 2.o ಎಂದೇ ಕರೆಯುತ್ತಿದ್ದಾರೆ. ಫಿಟ್ನೆಸ್​ ಸಮಸ್ಯೆ, ಕೌಂಟುಬಿಕ ಕಲಹ ಹೀಗೆ ಅನೇಕ ಸಮಸ್ಯೆಗಳನ್ನ ಎದುರಿಸಿದ ಮೊಹಮ್ಮದ್​ ಶಮಿ ಅದ್ಭುತವಾಗಿ ಆಟವಾಡುತ್ತಿದ್ದಾರೆ. ಈ ಸಾಧನೆ ಕುರಿತು ಮಾತನಾಡಿರುವ ಬಂಗಾಳದ ಬೌಲರ್​​ ಶಮಿ ‘ನಾನು ಸಾಕಷ್ಟು ನೊಂದು, ಕಷ್ಟ ಪಟ್ಟು ಈ ಸ್ಥಾನಕ್ಕೆ ಕಂಬ್ಯಾಕ್​ ಮಾಡಿದ್ದೇನೆ. ಆ ದೇವರಿಗೆ ನಾನು ಕೃತಜ್ಞನಾಗಿರುವೆ. ನನ್ನ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.

Comments are closed.