
ಇಂದೋರ್: ನಾಗರಿಕ ಸಮಿತಿಯ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ಮಾಡಿದ ಮಧ್ಯಪ್ರದೇಶದ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯ್ ವಾರ್ಗಿಯಾ ಅವರ ಮಗ ಆಕಾಶ್ ವಿಜಯ್ ವಾರ್ಗಿಯಾನನ್ನು ಪೊಲೀಸರು ಬಂಧಿಸಿದ್ದಾರೆ.
ಆಕಾಶ್ ಇಂಧೋರ್-3 ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ನಾಗರಿಕ ಸಮಿತಿಯ ಅಧಿಕಾರಿಯನ್ನು ಸಾರ್ವಜನಿಕರ ಎದುರಲ್ಲೇ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೇ ನಡೆಸಿದ್ದರು. ನಡುರಸ್ತೆಯಲ್ಲೇ ನೂರಾರು ಸಾರ್ವಜನಿಕರ ಎದುರು ಸರ್ಕಾರಿ ಅಧಿಕಾರಿಯನ್ನು ಆಕಾಶ್ ಮತ್ತು ಆತನ ಬೆಂಬಲಿಗರು ಥಳಿಸುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಇಂದೋರ್ನ ಗಂಜಿ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಇದನ್ನು ತೆರವುಗೊಳಿಸಲು ನಗರ ಪಾಲಿಕೆ ಅಧಿಕಾರಿಗಳು ಧೀರೇಂದ್ರ ಬೈಯಾಸ್ ಮತ್ತು ಅಶೀತ್ ಖಾರೆ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಆಗ ಸ್ಥಳಕ್ಕೆ ಬಂದ ಶಾಸಕ ಆಕಾಶ್ ವಿಜಯ್ವಾರ್ಗಿಯಾ ಮತ್ತು ಆತನ ಬೆಂಬಲಿಗರು, ನೀನು ಇನ್ನು ಐದು ನಿಮಿಷದಲ್ಲಿ ಸ್ಥಳದಿಂದ ಹೋಗದಿದ್ದರೆ ಮುಂದಿನ ಪರಿಣಾಮಗಳಿಗೆ ನೀನೇ ಹೊಣೆ ಎಂದು ಅಧಿಕಾರಿಗೆ ಹೆದರಿಸಿದ್ದಾರೆ.
ಆ ಕ್ಷಣದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದಿದ್ದ ಆಕಾಶ್ ಏಕಾಏಕಿ ಬ್ಯಾಟ್ನಿಂದ ಇಬ್ಬರು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಡೆಗಟ್ಟಲು ಮುಂದಾದರೂ ಅವರನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ.
ನಾನು ಅವರಿಗೆ ಹೇಳಿದೆ. ಇನ್ನು ಹತ್ತು ನಿಮಿಷದಲ್ಲಿಇಲ್ಲಿಂದ ಹೊರಡಿ. ನಾನು ಈ ಕ್ಷೇತ್ರ ಚುನಾಯಿತ ಪ್ರತಿನಿಧಿ. ಸಾರ್ವಜನಿಕರು ಮತ್ತು ಪ್ರಾಧಿಕಾರದ ನಡುವೆನ ಸಮಸ್ಯೆಯನ್ನು ನಾನು ಬಗೆಹರಿಸಿಕೊಡುತ್ತೇನೆ. ನಾನು ಸಾಕಷ್ಟು ತಾಳ್ಮೆಯಿಂದ ಅವರಿಗೆ ಹೇಳಿದೆ. ಆದರೆ, ನಾಗರಿಕ ಸಮಿತಿ ಅಧಿಕಾರಿಗಳು ದಾದಾಗಿರಿ ಮಾಡಲು ಮುಂದಾದರು. ಮತ್ತು ಜನರ ಮಾತನ್ನು ಕೇಳುತ್ತಿರಲಿಲ್ಲ ಎಂದು ವರದಿಗಾರರಿಗೆ ಆಕಾಶ್ ವಿಜಯ್ ವಾರ್ಗಿಯಾ ಹೇಳಿದ್ದಾರೆ.
ಸರ್ಕಾರಿ ಅಧಿಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ಸಂಬಂಧ ಆಕಾಶ್ ವಿಜಯ್ ವಾರ್ಗಿಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಇಬ್ಬರು ಸರ್ಕಾರಿ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಗೂಂಡಾಗಿರಿ ಮಾಡಿದ ಬಿಜೆಪಿ ಶಾಸಕನನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಗೃಹಸಚಿವ ಬಾಲ ಬಚ್ಚನ್, ಇದು ಬಿಜೆಪಿಯ ನಿಜವಾದ ಮುಖ ಮತ್ತು ಗುಣ. ಜನಪ್ರತಿನಿಧಿಗಳಿಗೆ ತಮ್ಮ ಮೇಲೆಯೇ ನಿಯಂತ್ರಣವಿಲ್ಲ. ಅವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Comments are closed.