ಕರಾವಳಿ

ಚಂಚಲ ಮನಸ್ಥಿತಿಯನ್ನು ಹೋಗಲಾಡಿಸಿ ಸಮಸ್ಥಿತಿಯನ್ನು ಸಾಧಿಸುವುದೇ ಯೋಗ : ಯೋಗ ಗುರು ಸಂಜನಾ ಮೂರ್ತಿ

Pinterest LinkedIn Tumblr

ಮಂಗಳೂರು,ಜೂನ್.21: ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಮನಸ್ಸನ್ನು ನಿಯಂತ್ರಿಸುವಲ್ಲಿ ಯೋಗವು ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಯೋಗ ಗುರು ಶ್ರೀಮತಿ ಸಂಜನಾ ಮೂರ್ತಿ ಅಭಿಪ್ರಾಯ ಪಟ್ಟರು.

ಅವರು ಡಾ.ಪಿ.ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ರಥಬೀದಿ, ಇಲ್ಲಿನ ರೇಂಜರ್‍ಸ್/ ರೋವರ್‍ಸ್ ಘಟಕದ ಹಾಗೂ ಯುವ ರೆಡ್ ಕ್ರಾಸ್ ವತಿಯಿಂದ ಕಾಲೇಜಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಯೋಗದ ಇತಿಹಾಸ ಹಾಗೂ ಮಹತ್ವಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ ಇವರು, ಮಾತನಾಡಿ ಮನಸ್ಸು ಹಾಗೂ ದೇಹವನ್ನು ಸಮತೋಲನದಿಂದ ಇರಿಸಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಏಕಾಗ್ರತೆ ಮೂಡಿಸುವಲ್ಲಿ ಯೋಗವು ಅತ್ಯಂತ ಸಹಕಾರಿ ಯಾಗಿದೆ. ನಿರಂತರ ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲೂ ಬದಲಾವಣೆಗಳಾಗಿ, ದುರಾಭ್ಯಾಸಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಲು ಯೋಗದಿಂದ ಸಾಧ್ಯ ಎಂದರು.

ಶೈಕ್ಷಣಿಕ ಸಲಹೆಗಾರರಾದ ಡಾ. ಶಿವರಾಮ ಪಿ, ಇವರು ಮಾತನಾಡಿ ವಿದ್ಯಾರ್ಥಿಗಳೆಲ್ಲರೂ ಪ್ರತಿ ನಿತ್ಯ ಯೋಗವನ್ನು ಅಭ್ಯಾಸ ಮಾಡುವುದರಿಂದ, ಮನಸ್ಸು ಪ್ರಪುಲ್ಲತೆಯಿಂದ ಇದ್ದು, ಸಂಯಮ ಹಾಗು ಏಕಾಗ್ರತೆಯನ್ನು ಬದುಕಲ್ಲಿ ರೂಡಿಸಲು ಯೋಗ ತುಂಬಾ ಉಪಕಾರಿ ಎಂದರು.

ರೋವರ್‍ಸ್ ಘಟಕಾಧಿಕಾರಿಗಳಾದ ಪ್ರೊ. ಪುರುಷೋತ್ತಮ ಭಟ್ ಸ್ವಾಗತಿಸಿದರು. ರೇಂಜರ್‍ಸ್ ನಿರ್ದೇಶಕಿ ಡಾ. ಶೈಲಾರಾಣಿ. ಬಿ. ವಂದನಾರ್ಪಣೆ ಗೈದರು. ಯುವ ರೆಡ್‌ಕ್ರಾಸ್ ಯೋಜನಾಧಿಕಾರಿ ಡಾ.ಮಹೇಶ್. ಕೆ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೊ.ರವಿಕುಮಾರ್ ಹಾಗೂ ಡಾ.ಜಯಶ್ರೀ. ಬಿ. ಭಾಗವಹಿಸಿದ್ದರು. ಕು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.

Comments are closed.