
ಬೆಂಗಳೂರು: ಮಂಡ್ಯದ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ನಡೆದ ಭೀಕರ ಬಸ್ ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ಕೇಂದ್ರದ ಪರಿಹಾರಕ್ಕೆ ಪಕ್ಷೇತರ ಸಂಸದೆ ಸುಮಲತಾ ಅವರೇ ಕಾರಣ ಎಂದು ತಮ್ಮ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿಯೇ ಜೆಡಿಎಸ್ ಬೆಂಬಲಿಗರು ಸುಮಲತಾ ಬೆಂಬಲಿಗರ ಮೇಲೆ ತೀವ್ರ ವಾಕ್ಸಮರ ಮುಂದುವರಿಸಿದ್ದಾರೆ.
ಈ ಬೆನ್ನಲ್ಲೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್, ಕೇಂದ್ರ ಪರಿಹಾರ ನೀಡಿದ ಕ್ರೆಡಿಟ್ ನನಗೆ ಬೇಡ ಎಂದಿದ್ದಾರೆ. ಹಾಗೆಯೇ ಇದೊಂದು ದುರಂತದ ಸಂಗತಿ. ಮೃತ ಕುಟುಂಬಗಳಿಗೆ ಪರಿಹಾರ ತಲುಪಿದೆ ಎಂಬುದು ಮಾತ್ರ ಮುಖ್ಯ. ಯಾರು ಕೇಂದ್ರದಿಂದ ಕೊಡಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ನಾನು ಕೊಟ್ಟೇ, ನೀವು ಕೊಡಿಸಿದ್ದೀರಿ ಎಂಬ ಚರ್ಚೆಯೇ ತಪ್ಪು. ಈ ರೀತಿ ಮಾತನಾಡಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.
ಅತ್ತ ಕೇಂದ್ರದಿಂದ ಹಣ ಕೊಡಿಸಿದ್ದು ಸುಮಲತಾ ಎಂದು ತಮ್ಮ ಬೆಂಬಲಿಗರು ಹೇಳುತ್ತಿದ್ದರೇ, ಇತ್ತ ಜೆಡಿಎಸ್ ಕಾರ್ಯಕರ್ತರು ಪರಿಹಾರದ ಕೊಡಿಸಿದ್ದು ಸಿಎಂ ಎಚ್.ಡಿ ಕುಮಾರಸ್ವಾಮಿ ಎನ್ನುತ್ತಿದ್ದಾರೆ. ಎರಡು ಗುಂಪುಗಳ ನಡುವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಕಳೆದ ವರ್ಷದ ನವೆಂಬರ್ 24ರಂದು ಖಾಸಗಿ ಬಸ್ಸೊಂದು ಪಾಂಡವಪುರ ಸಮೀಪದ ನಾಲೆಗೆ ಉರುಳಿತ್ತು. ಈ ವೇಳೆ ಬಸ್ ದುರಂತದಲ್ಲಿ 30 ಜನರು ಜಲಸಮಾಧಿಯಾಗಿದ್ದರು. ತಕ್ಷಣ ರಾಜ್ಯ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಅಲ್ಲದೆ, ಈಗ ಕೇಂದ್ರದಿಂದ 2 ಲಕ್ಷ ಹೆಚ್ಚುವರಿ ಮೊತ್ತ ಸಿಗುತ್ತಿದೆ ಎಂದು ಖುದ್ದು ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಕೂಡ ತಿಳಿಸಿದ್ದರು.
ಕೇಂದ್ರದಿಂದ ಹಣ ಕೊಡಿಸಿದ್ದು ಸುಮಲತಾ ಎವರೇ ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡಿದ ನೂತನ ಸಂಸದೆ ಸುಮಲತಾಗೆ ಧನ್ಯವಾದ ಎಂಬುದಾಗಿ ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿವೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಬೆಂಬಲಿಗರು ಸುಮಲತಾ ವಿರುದ್ಧ ಕೆಂಡಕಾರುತ್ತಿದ್ದಾರೆ.
Comments are closed.