ಕರ್ನಾಟಕ

ಜನತೆಯಲ್ಲಿ ಸುಮಲತಾ ಅಂಬರೀಶ್ ಮನವಿ!

Pinterest LinkedIn Tumblr


ಬೆಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಮುಗಿದೆ. ಚುನಾವಣೆ ಮುಗಿದ ನಂತರವೂ ವೈಷಮ್ಯ ಮುಂದುವರೆಸದಂತೆ ಮಂಡ್ಯ ಜನರಿಗೆ ಕ್ಷೇತ್ರದ ಪಕ್ಷೇತರ ವಿಜೇತ ಅಭ್ಯರ್ಥಿ ಸುಮಲತಾ ಅಂಬರೀಶ್ ಕರೆ ಕೊಟ್ಟಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನನ್ನ ಎಲ್ಲಾ ಬಂಧುಗಳೇ, ಚುನಾವಣೆ ಮುಗಿದಿದೆ ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಳು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ. ಆದರೆ, ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಿರುವವರು ಚುನಾವಣೆಯ ದ್ವೇಷಗಳನ್ನು ವೈಷಮ್ಯಗಳನ್ನು ಚುನಾವಣೆಗೆ ಬಿಟ್ಟುಬಿಡಬೇಕು ಎಂದಿದ್ದಾರೆ.

ಚುನಾವಣೆ ಮುಗಿದು ಫಲಿತಾಂಶ ಬಂದ ನಂತರವೂ ಅದನ್ನು ಮುಂದುವರಿಸಬಾರದು ಒಂದೇ ಕುಟುಂಬದಂತೆ ನಾವೆಲ್ಲರೂ ಬದುಕಬೇಕಾಗಿದೆ. ಕಾಂಗ್ರೆಸ್-ಜೆಡಿಎಸ್ ಹಾಗು ಬಿಜೆಪಿ ಇವೆಲ್ಲವೂ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆಯ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಬೇಕು ಚಿಂತಿಸಬೇಕು. ಮಂಡ್ಯದ ಜನತೆಯಾದ ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕೋಣ ರಾಜಕೀಯ ಕಿತ್ತಾಟಗಳನ್ನು ದಯವಿಟ್ಟು ಯಾರೂ ಮಾಡಬೇಡಿ. ಇದು ನನ್ನ ಜನತೆಯಲ್ಲಿ ನನ್ನ ಪ್ರೀತಿಯ ಮನವಿ ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿಕೊಂಡಿದ್ದಾರೆ.

ಮೇ 23ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತ್ತು. ಇದರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜೆಡಿಎಸ್-ಕಾಂಗ್ರೆಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ 1,25,876 (ಒಂದು ಲಕ್ಷದ ಇಪ್ಪತೈದು ಸಾವಿರಾದ ಎಂಟುನೂರ ಎಪ್ಪತ್ತಾರು) ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ.

ಅಲ್ಲದೇ ದೇಶದ್ಯಂತ ಬಹಳ ಕುತೂಹಲ ಮೂಡಿಸಿದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯೂ ಜಿದ್ದಾಜಿದ್ದಿನ ಕಣವಾಗಿತ್ತು. ಜಿಲ್ಲೆಯಲ್ಲಿ ಬಾರೀ ಬೆಟ್ಟಿಂಗ್​ ಕೂಡ ನಡೆದಿತ್ತು ಎಂದು ಹೇಳಲಾಗಿತ್ತು. ಸದ್ಯ ಚುನಾವಣಾ ಫಲಿತಾಂಶ ಹೊರಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಸೋಲು-ಗೆಲುವಿನ ಬಗ್ಗೆ ಪರಾಮರ್ಶೆ ನಡೆಯುತ್ತಿದೆ.

Comments are closed.