
ವಿಜಯಪುರ: ಜೆಡಿಎಸ್ನ ವಿಜಯಪುರ ಮಾಜಿ ಜಿಲ್ಲಾಧ್ಯಕ್ಷೆ, ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಹತ್ಯೆ ಕೇಸ್ ಮಿಂಚಿನ ವೇಗ ಪಡೆಯುತ್ತಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆಪ್ತ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊಲೆಗೂ ಮುನ್ನ ರೇಷ್ಮಾ ಅವರು ಆಪ್ತ ಸಮೀವುಲ್ಲಾ ಜೊತೆಗೆ ಪೈಲ್ವಾನ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಫುಲ್ ವೈರಲ್ ಆಗಿದೆ. ಈ ಆಡಿಯೋದಲ್ಲಿ ತೌಫಿಕ್ ಪೈಲ್ವಾನ್ ಜೊತೆಗಿನ ಹಣದ ವ್ಯವಹಾರದ ಕುರಿತು ರೇಷ್ಮಾ ಹಾಗೂ ಸಮೀವುಲ್ಲಾ ಮಾತನಾಡಿದ್ದಾರೆ. ‘ತೌಫಿಕ ಪೈಲ್ವಾನ್ ಸಾವು ಬದುಕಿನ ನಡುವೆ ಜೀವನ ಮಾಡಬೇಕು. ಸಾಯಲು ಬಾರದು, ಜೀವಂತವಾಗಿನೂ ಇರಬಾರದು ಎಂದು ರೇಷ್ಮಾ ಹೇಳಿದ್ದಾರೆ.
ಎಂಐಎಂ ಮುಖಂಡ ತೌಫಿಕ್ ಪೈಲ್ವಾನ್ ಹೇಡಿ. ಇಂದಿಗೂ ಒಂದು ಮರ್ಡರ್ ಆಗಲಿ, ಹಾಫ್ ಮರ್ಡರ್ ಆಗಲಿ ಮಾಡಿಲ್ಲ. ಅವನೊಬ್ಬ ರಾಜಕೀಯ ವ್ಯಕ್ತಿಯೆಂದು ಸುಮ್ಮನೆ ಇದ್ದೇನೆ ಎಂದು ರೇಷ್ಮಾ ಹೇಳಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ತೌಫಿಕ್ ಸೇರಿ ಒಟ್ಟು ಆರು ಜನ ಕೊಲೆ ಮಾಡಿದ್ದು, ಮಧ್ಯರಾತ್ರಿ 1:15 ನಿಮಿಷಕ್ಕೆ ಕೊಲೆ ಆಗಿರುವ ಸಂಭವವಿದೆ. ಅಷ್ಟೇ ಅಲ್ಲದೆ ತೌಫಿಕ್ನ ದೂರವಾಣಿ ಸಂಖ್ಯೆ ನೆಟ್ವರ್ಕ್ ರಾತ್ರಿ 12 ಗಂಟೆ ಸುಮಾರಿಗೆ ರೇಷ್ಮಾ ಮನೆ ಆಸುಪಾಸು ಸಿಕ್ಕಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕರವೇ ನಾರಾಯಣ ಗೌಡ ಬಣದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿದ್ದ ರೇಷ್ಮಾ ಕೌಸರ್ ಪಡೇಕನೂರ ಕನ್ನಡ ಪರ ಹೋರಾಟಗಳಲ್ಲಿ ಪ್ರಚಲಿತರಿದ್ದರು. ಹೀಗಾಗಿ ಇಂದು ವಿಜಯಪುರ ಕರವೇ ಚಳುವಳಿಗಾರರು ರೇಷ್ಮಾ ಹತ್ಯೆ ಮಾಡಿದವರನ್ನು ಶೀಘ್ರವೇ ಬಂಧಿಸುವಂತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.
ರೇಷ್ಮಾ ಪತಿ ಖಾಜಾ ಬಂದೇ ನವಾಜ್ ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಶೇಖ್ ಊರ್ಫ್ ಪೈಲ್ವಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತೌಫಿಕ್ ವಿರುದ್ಧ ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಮಟ್ಟದಲ್ಲಿ ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ಹಾಗೂ ವಿಜಯಪುರ ಡಿಎಸ್ಪಿ ಅಶೋಕ್ ನೇತೃತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಓರ್ವ ಸಿಪಿಐ, ಇಬ್ಬರು ಪಿಎಸ್ಐ ಹಾಗೂ ಪೇದೆಗಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮೆಗೌಡ ಮಾಹಿತಿ ನೀಡಿದ್ದಾರೆ.
Comments are closed.