ರಾಷ್ಟ್ರೀಯ

ಮೋದಿ ಹಿಮಾಲಯದ ಗುಹೆಯಲ್ಲಿ ಕಾವಿ ಬಟ್ಟೆ ತೊಟ್ಟು ಧ್ಯಾನ ಮಾಡಿದ್ದು ಯಾಕೆ ಗೊತ್ತಾ..?

Pinterest LinkedIn Tumblr

ಪ್ರಧಾನಿ ಮೋದಿ ಈಗ ಹಿಮಾಲಯ ವಾಸಿ. ಒಂದು ತಿಂಗಳ ಸುಧೀಘ್ರ ಪ್ರಚಾರದ ಬಳಿಕ ಕೇದಾರನಾಥ, ಬದರಿನಾಥ ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ. ಒತ್ತಡದಿಂದ ಮುಕ್ತಿ ಪಡೆಯಲು ನೂರಾರು ವರ್ಷಗಳ ಇತಿಹಾಸವುಳ್ಳ ಗುಹೆಯಲ್ಲಿ ಕಾವಿ ಬಟ್ಟೆ ತೊಟ್ಟು ಧ್ಯಾನಕ್ಕೆ ಕುಳಿತ್ತಿದ್ದಾರೆ.

ಒಂದು ತಿಂಗಳ ಸುಧೀಘ್ರ ಪ್ರಚಾರದ ಬಳಿಕ ದೇವರ ಮೊರೆ ಹೋಗಿದ್ದಾರೆ ಪ್ರಧಾನಿ ಮೋದಿ. ಫಲಿತಾಂಶಕ್ಕೆ ಕೇವಲ 4 ದಿನ ಇರುವಂತೆಯೇ ಹಿಂದೂಗಳ ಪವಿತ್ರ ಸ್ಥಳ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಕ್ಕೆ 2 ದಿನಗಳ ಕಾಲ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಇಂದು ಕೇದರನಾಥ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ. ನಾಳೆ ದೆಹಲಿಗೆ ಹಿಂದಿರುಗುವುದಕ್ಕೂ ಮೊದಲು ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ಕೇದಾರನಾಥ ಕ್ಷೇತ್ರಕ್ಕೆ ಬಂದಿಳಿದ ಪ್ರಧಾನಿ, ಉತ್ತರಾಖಂಡ್‌ನ ಸಾಂಪ್ರದಾಯಿಕ ಪಹರಿ ಉಡುಗೆ ಧರಿಸಿದ್ದರು. ಸುಮಾರು ಅರ್ಧಗಂಟೆ ಕಾಲ ದೇವರಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿದರು. ಬಳಿಕ ಕೇದರಪುರಿ ಮರುನಿರ್ಮಾಣ ಯೋಜನೆ ಕೆಲಸ ಪರಿಶೀಲಿಸಿದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಕ್ಷೇತ್ರಕ್ಕೆ ಮೋದಿ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ.

ಕೇದಾರನಾಥ ದೇಗುಲದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಗುಹೆಗೆ ಮಳೆ ನಡುವೆಯೇ ನಡೆದುಕೊಂಡು ತೆರಳಿದರು. 5 ಮೀಟರ್ ಉದ್ದ, 3 ಮೀಟರ್ ಅಗಲವುಳ್ಳ ನೂರಾರು ವರ್ಷಗಳ ಇತಿಹಾಸವುಳ್ಳ ಗುಹೆಯಲ್ಲಿ ಕಾವಿ ಬಟ್ಟೆ ತೊಟ್ಟು ಧ್ಯಾನಕ್ಕೆ ಕುಳಿತರು. ನಾಳೆ ಬೆಳಿಗ್ಗೆವರೆಗೆ ಧಾನ್ಯ ಮುಂದುವರಿಸಲಿದ್ದಾರೆ. ಪ್ರಧಾನಿಯಾಗುವ ಮೊದಲೂ ಈ ದೇವಸ್ಥಾನಕ್ಕೆ ಭೇಟಿ ನೀಡಿ, ಇದೇ ಗುಹೆಯಲ್ಲಿ ಧ್ಯಾನ ಮಾಡಿದ್ದರು ಎಂದು ತಿಳಿದುಬಂದಿದೆ.

ಹಿಮಾಲಯ ಶ್ರೇಣಿಯಲ್ಲಿರುವ ಈ ಶಿವ ದೇಗುಲಕ್ಕೆ ಮೋದಿ ಪ್ರಧಾನಿಯಾದ ಬಳಿಕವೂ ಹಲವು ಬಾರಿ ಭೇಟಿ ನೀಡಿದ್ದರು. 2017ರಲ್ಲಿ ಎರಡು ಬಾರಿ ಬಂದಿದ್ದರು. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲೂ ಬಂದು ಪೂಜೆ ಸಲ್ಲಿಸಿದ್ದರು. ನಾಳೆ ಮತ್ತೊಂದು ಪವಿತ್ರ ಕ್ಷೇತ್ರವಾದ ಬದರಿನಾಥಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ದೇವಸ್ಥಾನ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಾಮರ್ಶಿಸಲಿದ್ದಾರೆ. ನಾಳೆ ಸಂಜೆ ದೆಹಲಿಗೆ ಹಿಂದಿರುಗಲಿದ್ದಾರೆ.

ನಾಳೆ ಮೋದಿ ಸ್ಪರ್ಧೆಯ ವಾರಣಾಸಿ ಸೇರಿದಂತೆ 59 ಕ್ಷೇತ್ರಗಳಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಇನ್ನೂ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಇದೊಂದು ಅಧಿಕೃತ ಭೇಟಿ ಆಗಿದ್ದು, ಚುನಾವಣಾ ಆಯೋಗವು ಪ್ರಧಾನಿ ಕಚೇರಿಗೆ ನೀತಿಸಂಹಿತೆ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದೆ. ಮಾರ್ಚ್‌ 10ರಂದು ಪ್ರಾರಂಭವಾಗಿರುವ ನೀತಿಸಂಹಿತೆಯು ಫಲಿತಾಂಶ ಬಂದು ಹೊಸ ಲೋಕಸಭೆ ರಚನೆ ಆಗುವವರೆಗೂ ಜಾರಿಯಲ್ಲಿರಲಿದೆ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಸೂಚಿಸಿದೆ.

ಮೋದಿ ಭೇಟಿಯಿಂದಾಗಿ ಸಮುದ್ರಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಕ್ಷೇತ್ರದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಉತ್ತರಾಖಂಡ್‌ನ ರುದ್ರಪ್ರಯಾಗ್‌ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ ಮುಚ್ಚಲಾಗಿತ್ತು. ಈಗ ಮೇ 9ರಿಂದ ತೆರೆಯಲಾಗಿದೆ.

Comments are closed.