ರಾಷ್ಟ್ರೀಯ

ತಾನು ಸಾಯುತ್ತೇನೆಯೇ ಹೊರತು ಬಿಜೆಪಿಗೆ ಲಾಭ ತರುವ ಕೆಲಸ ಮಾಡುವುದಿಲ್ಲ: ಮಾಯಾವತಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು

Pinterest LinkedIn Tumblr


ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಗಳನ್ನ ಸೋಲಿಸಲೆಂದೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಹಾಕಿದೆ ಎಂದು ಬಿಎಸ್​ಪಿ ಮಾಯಾವತಿ ಮಾಡಿರುವ ಆರೋಪಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಳ್ಳಿಹಾಕಿದ್ದಾರೆ. ರಾಯ್ ಬರೇಲಿಯಲ್ಲಿ ಇವತ್ತು ಚುನಾವಣಾ ಪ್ರಚಾರ ಮಾಡುತ್ತಿದ್ದ ಪ್ರಿಯಾಂಕಾ ಗಾಂಧಿ, ತಾನು ಸಾಯುತ್ತೇನೆಯೇ ಹೊರತು ಬಿಜೆಪಿಗೆ ಲಾಭ ತರುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಈ ವರ್ಷ ರಾಜಕಾರಣಕ್ಕೆ ದಿಢೀರ್ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ಕಾಂಗ್ರೆಸ್​ನ ಚುನಾವಣಾ ಉಸ್ತುವಾರಿಯೂ ಆಗಿದ್ಧಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಎಸ್​ಪಿ-ಬಿಎಸ್​ಪಿ ನೇತೃತ್ವದಲ್ಲಿ ಮಹಾಘಟಬಂಧನ್ ರಚನೆಯಾಗಿದ್ದರೂ ಕಾಂಗ್ರೆಸ್ ಪಕ್ಷ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತು. ಕಾಂಗ್ರೆಸ್​ನ ಈ ಅನಿರೀಕ್ಷಿತ ಮತ್ತು ಅಚ್ಚರಿ ನಡೆಯ ನಿರ್ಧಾರ ಪ್ರಿಯಾಂಕಾ ಗಾಂಧಿ ಅವರದ್ದಾಗಿತ್ತು. ಆದರೆ, ಕಾಂಗ್ರೆಸ್​ನ ಈ ನಡೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಪ್ರಬಲ ಮಹಾಮೈತ್ರಿಕೂಟದ ಗೆಲುವಿನ ದಾರಿಗೆ ಕಾಂಗ್ರೆಸ್ ಅಡ್ಡಗಾಲು ಹಾಕಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದೀಗ ಈ ಅನುಮಾನಗಳನ್ನು ದೂರ ಮಾಡಲು ಪ್ರಿಯಾಂಕಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಪೂರಕವಾಗಿ ಕಾಂಗ್ರೆಸ್​ನ ಅಭ್ಯರ್ಥಿಗಳನ್ನು ಹುಡುಕಿ ಕಣಕ್ಕಿಳಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವಷ್ಟು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನ ಹಾಕಿದ್ದೇವೆ. ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಗಳು ಹೆಚ್ಚು ಪ್ರಬಲವಿದ್ದ ಕಡೆ ಬಿಜೆಪಿಯ ಮತಗಳನ್ನ ವಿಭಜಿಸಬಲ್ಲ ಅಭ್ಯರ್ಥಿಗಳನ್ನ ಹೆಕ್ಕಿ ಕಾಂಗ್ರೆಸ್ ಕಣಕ್ಕಿಳಿಸಿದೆ” ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ.

ಆದರೆ, ಪ್ರಿಯಾಂಕಾ ಗಾಂಧಿ ಈ ಸಮರ್ಥನೆಯನ್ನು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಒಪ್ಪುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದೇ ಅಂಗಿಬಟ್ಟೆಯನ್ನು ಹರಿದು ಎರಡೂ ಧರಿಸಿವೆ. ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಂಡಿದ್ದೇ ಇದಕ್ಕೆ ಸಾಕ್ಷಿ ಎಂದು ಮಾಯಾವತಿ ಆರೋಪಿಸಿದ್ಧಾರೆ.

ವಾಸ್ತವವಾಗಿ, ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಪಕ್ಷಗಳು ಸೇರಿ ಮಾಡಿರುವ ಮಹಾಘಟಬಂಧನ್​ಗೆ ಸೇರಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ, ಎಸ್​ಪಿ ಮತ್ತು ಬಿಎಸ್​ಪಿ ಎರಡೂ ಪಕ್ಷಗಳು ಕಾಂಗ್ರೆಸ್ಸನ್ನು ದೂರ ಇಡಲು ನಿರ್ಧರಿಸಿ, ಆ ಪಕ್ಷದ ಪ್ರಸ್ತಾವನೆಯನ್ನು ತಿರಸ್ಕರಿಸಿದವು. ತಮ್ಮ ಚುನಾವಣಾ ರಣತಂತ್ರಗಳಿಗೆ ಕಾಂಗ್ರೆಸ್​ನ ತತ್ವ ಹೊಂದಿಕೆಯಾಗುವುದಿಲ್ಲ ಎಂಬುದು ಎಸ್​ಪಿ, ಬಿಎಸ್​ಪಿ ಪಕ್ಷಗಳ ಅಭಿಪ್ರಾಯವಾಗಿತ್ತು. ಆದರೆ, ರಾಹುಲ್ ಮತ್ತು ಸೋನಿಯಾ ಗಾಂಧಿ ಸ್ಪರ್ಧಿಸಿರುವ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳನ್ನ ಹಾಕಿಲ್ಲ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸುಮಾರು ಶೇ. 8ರಷ್ಟು ಮತಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ತಕ್ಕಮಟ್ಟಿಗೆ ಬಲಶಾಲಿ ಎನಿಸಿದೆ. ಏಳೆಂಟು ಸ್ಥಾನಗಳಲ್ಲಿ ಗೆಲ್ಲುವಷ್ಟು ಶಕ್ತಿಯನ್ನು ಈಗಲೂ ಉಳಿಸಿಕೊಂಡಿದೆ.

Comments are closed.