
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೋಮವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ.
ಸೋಮವಾರ ಮಹರಾಷ್ಟ್ರದಲ್ಲಿ 4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಿತು. ಈ ವೇಳೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬ, ರಣ್‍ವೀರ್ ಸಿಂಗ್ ಸೇರಿದಂತೆ ಹಲವು ತಾರೆಯರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಆದರೆ ನಟ ಅಕ್ಷಯ್ ಮತ ಹಾಕಲಿಲ್ಲ. ಇದೀಗ ಈ ವಿಷಯಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ದೇಶಭಕ್ತ ಅಕ್ಷಯ್ ಕುಮಾರ್ ಹೊರತುಪಡಿಸಿ ಶಾರೂಕ್, ಸಲ್ಮಾನ್, ಅಮೀರ್ ಹಾಗೂ ಟ್ವಿಂಕಲ್ ಖನ್ನಾ ಎಲ್ಲರೂ ವೋಟ್ ಹಾಕಿದ್ದಾರೆ. ಅಕ್ಷಯ್ ಕೆನೆಡಾ ದೇಶದ ನಾಗರಿಕ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬಾಲಿವುಡ್‍ನ ದೊಡ್ಡ ದೇಶಭಕ್ತ ತನ್ನ ಮತ ಚಲಾಯಿಸಿಲ್ಲ ಎಂದು ಮತ್ತೊಬ್ಬರು ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗೆ ಅಕ್ಷಯ್, ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರು. ಬಳಿಕ ತಮ್ಮ ಟ್ವಿಟ್ಟರಿನಲ್ಲಿ, “ಇಡೀ ದೇಶ ಚುನಾವಣೆ ಹಾಗೂ ರಾಜಕೀಯದ ಬಗ್ಗೆ ಮಾತನಾಡುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಾಜಕೀಯ ವಿಷಯ ಚರ್ಚೆ ಮಾಡದೆ ಕೇವಲ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದರು.
ಮತದಾನ ಮಾಡದ್ದು ಯಾಕೆ?
ದೇಶಕ್ಕಾಗಿ ಮತ ಹಾಕಿ ಎಂದು ಅಕ್ಷಯ್ ಕುಮಾರ್ ಜನತೆಯಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ಅಕ್ಷಯ್ ಕುಮಾರ್ ಅವರು ಭಾರತೀಯ ನಾಗರಿಕರಲ್ಲ. ಅವರು ಕೆನಡಾದ ಪಾಸ್‍ಪೋರ್ಟ್ ಹೊಂದಿದ್ದು, ಅವರು ಕೆನಡಾದ ನಾಗರಿಕರಾಗಿದ್ದಾರೆ. ಹೀಗಾಗಿ ಅಕ್ಷಯ್ ಮತದಾನ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
Comments are closed.