ಕರ್ನಾಟಕ

ಎಸ್ಸೆಸ್ಸೆಲ್ಸಿ: ಸ್ಕೋಲಿಯೋಸಿಸ್‌ ಎಂಬ ಬೆನ್ನುಹುರಿ ಬೆಳವಣಿಗೆಯಾಗದ ಸಮಸ್ಯೆ ಬಾಧಿತ ಸಿಂಚನಲಕ್ಷ್ಮೀ ರಾಜ್ಯಕ್ಕೆ ದ್ವಿತೀಯ

Pinterest LinkedIn Tumblr


ಪುತ್ತೂರು: ಹುಟ್ಟಿನಿಂದಲೇ ಬಾಧಿಸಿದ ಸ್ಕೋಲಿಯೋಸಿಸ್‌ ಎಂಬ ಬೆನ್ನುಹುರಿ ಬೆಳವಣಿಗೆಯಾಗದ ಸಮಸ್ಯೆ. ಅದಕ್ಕೆ ಆರು ಬಾರಿ ಶಸ್ತ್ರಚಿಕಿತ್ಸೆ. ಎಲ್ಲರಂತೆ ಚುರುಕಾಗಿ ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗದ ಸ್ಥಿತಿ…

ಇಂತಹ ಸವಾಲುಗಳನ್ನು ಮೆಟ್ಟಿ ನಿಂತು ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದವರ ಸಾಲಿನಲ್ಲಿ ನಿಂತಿರುವ ದಿಟ್ಟೆ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ಲಕ್ಷ್ಮೀ. ಆಂಗ್ಲ ಭಾಷೆಯಲ್ಲಿ 99 ಬಿಟ್ಟರೆ ಉಳಿದ ಎಲ್ಲ ವಿಷಯಗಳಲ್ಲೂ ಪೂರ್ಣಾಂಕ ಪಡೆದುಕೊಂಡಿದ್ದಾಳೆ.

ಮುಂಡೂರು ಸಮೀಪದ ಕೊಡೆಂಕಿರಿ ಬಂಗಾರಡ್ಕದ ಅಯೋಧ್ಯಾ ಮನೆಯ ಕೃಷಿಕ ಮುರಳೀಧರ ಭಟ್‌ ಮತ್ತು ಶೋಭಾ ದಂಪತಿಯ ದ್ವಿತೀಯ ಪುತ್ರಿ ಈಕೆ. ತಂದೆ ಕೃಷಿಕರಾದರೆ ತಾಯಿ ಗೃಹಿಣಿ. ಸಹೋದರಿ ಸಿಂಧೂರ ಸರಸ್ವತಿ ವಿವೇಕಾನಂದ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾಭಾಸ ಮಾಡುತ್ತಿದ್ದಾರೆ. ಸಹೋದರ ಚೈತನ್ಯರಾಮ ವಿವೇಕಾನಂದ ಶಾಲೆಯಲ್ಲಿ ಒಂದನೆಯ ತರಗತಿ ಸೇರಿದ್ದಾನೆ.

ಖಾಯಿಲೆ ಮೆಟ್ಟಿ ನಿಂತ ದಿಟ್ಟೆ: ಸಿಂಚನಾ ಜನ್ಮತಃ ಸ್ಕೋಲಿಯೋಸಿಸ್‌ ಪೀಡಿತಳಾಗಿದ್ದಾಳೆ. ಇದು ಬೆನ್ನೆಲುಬು ಬೆಳವಣಿಗೆಯ ಸಮಸ್ಯೆ. ಸಿಂಚನಾಗೆ ಒಂದು ವರ್ಷವಾದಾಗ ಇದು ಅರಿವಿಗೆ ಬಂತು. ಎರಡು ವರ್ಷವಾದಾಗ ಕುತ್ತಿಗೆ ವಾಲಲು ಆರಂಭವಾಯಿತು. ಚಿಕ್ಕ ಮಗುವಾಗಿರುವಾಗ ಎಂಆರ್‌ಐ ಸ್ಕ್ಯಾನ್‌ ಮಾಡಲು ಹೆತ್ತವರಿಗೆ ಮನಸ್ಸು ಬರಲಿಲ್ಲ.

ಸಿಂಚನಾ 5ನೇ ತರಗತಿಗೆ ಬಂದಾಗ ಕೈಯಲ್ಲೂ ನೋವು ಕಾಣಿಸಿಕೊಂಡಿತು. ವೈದ್ಯರ ಸಲಹೆ ಪಡೆದು ಕೊಯಮತ್ತೂರಿನ ಗಂಗಾ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿನ ತಜ್ಞ ವೈದ್ಯರ ಮೂಲಕ ಆಕೆ 9ನೇ ತರಗತಿ ತಲುಪುವ ತನಕ ಆರು ಬಾರಿ ಬೆನ್ನುಹುರಿಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಇದು ಬೆನ್ನು ಮೂಳೆಯನ್ನು ಜಗ್ಗಿ ಎತ್ತರಿಸಿ ಕೂರಿಸುವ ಕಸಿ ಶಸ್ತ್ರಚಿಕಿತ್ಸೆ. ಸುಮಾರು 25 ಲಕ್ಷ ರೂ.ಗೂ ಹೆಚ್ಚು ಖರ್ಚಾಗಿದೆ. ಯಾರಲ್ಲೂ ಸಹಾಯ ಕೇಳಿಲ್ಲ. ಗಿಡ್ಡವಾಗಿದ್ದಾಳೆ ಎಂಬುದನ್ನು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ ಎನ್ನುತ್ತಾರೆ ತಾಯಿ ಶೋಭಾ ಮುರಳೀಧರ ಭಟ್‌.

ಮಗಳಿಗೆ ಶಸ್ತ್ರಚಿಕಿತ್ಸೆ ಆದಾಗ ಸ್ವಲ್ಪ ದಿನ ನಾವೇ ಶಾಲೆಗೆ ಕಾರಿನಲ್ಲಿ ಬಿಡುತ್ತಿದ್ದೆವು. ಇತರ ದಿನ ಶಾಲಾ ವಾಹನದಲ್ಲೇ ಹೋಗುತ್ತಿದ್ದಳು. ಎಳೆಯ ವಯಸ್ಸಿಗೇ ತುಂಬಾ ಕಷ್ಟ, ನೋವು ಅನುಭವಿಸಿದರೂ ತುಂಬಾ ಸ್ಥೈರ್ಯ ಹೊಂದಿದ್ದಾಳೆ. ಪಠ್ಯೇತರ ಚಟುವಟಿಕೆಯಲ್ಲೂ ಸಾಧನೆ ಮಾಡಿದ್ದಾಳೆ. ಮಗಳ ಸಾಧನೆ ಖುಷಿ ನೀಡಿದೆ ಎನ್ನುತ್ತಾರೆ ಶೋಭಾ.

ಪ್ರತಿ ಬಾರಿ ಆಪರೇಷನ್‌ ಆದಾಗಲೂ ಕುತ್ತಿಗೆಗೆ ಪ್ಲಾಸ್ಟರ್‌ ಹಾಕಲಾಗುತ್ತಿತ್ತು. ಶಾಲೆಯಲ್ಲಿ ಮೇಲಿನ ಅಂತಸ್ತಿನಲ್ಲಿ ಆಕೆಯ ತರಗತಿ ಇದ್ದು, ಕೆಳಗೆ ವ್ಯವಸ್ಥೆ ಮಾಡುತ್ತೇವೆ ಎಂದರೂ ಸಿಂಚನಾ ಒಪ್ಪದೆ ಎಲ್ಲರಂತೆ ಇರುತ್ತೇನೆ. ಮೇಲಿನ ತರಗತಿಯಲ್ಲಿಯೇ ಕೂರುತ್ತೇನೆ ಎನ್ನುತ್ತಿದ್ದಳು. ಆಕೆಯ ಮನಸ್ಸಿಗೆ ನೋವಾಗದಂತೆ ಸಹಕರಿಸುತ್ತಿದ್ದೆವು.
-ಸತೀಶ್‌ ಕುಮಾರ್‌, ಶಾಲಾ ಮುಖ್ಯ ಶಿಕ್ಷಕ.

ಆಕೆಗೆ ನಾವು ಒತ್ತಡ ಹಾಕಿಲ್ಲ. ಸ್ವ ಇಚ್ಛೆಯಿಂದ ಓದುತ್ತಿದ್ದಳು. ಬೆಳಗ್ಗೆಯೂ ತೀರಾ ಬೇಗ ಏಳುತ್ತಿರಲಿಲ್ಲ. ಆಕೆಯ ಸಾಧನೆ ಅತ್ಯಂತ ಖುಷಿ ತಂದಿದೆ.
-ಮುರಳೀಧರ ಭಟ್‌, ತಂದೆ.

ಆಂಗ್ಲ ಭಾಷಾ ವಿಷಯದ ಪರೀಕ್ಷೆ ಸ್ವಲ್ಪ ಕಷ್ಟಕರವಾಗಿತ್ತು. ಆದ್ದರಿಂದ ಇಷ್ಟೊಂದು ಅಂಕದ ನಿರೀಕ್ಷೆ ಇರಲಿಲ್ಲ. ಅಂದಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಕೋಚಿಂಗ್‌ಗೆ ಹೋಗಿಲ್ಲ. ಉತ್ತಮ ಅಂಕ ಬಂದಿರುವುದು ಖುಷಿಯಾಗಿದೆ. ವೈದ್ಯೆಯಾಗುವ ಕನಸು ಇರುವುದರಿಂದ ಅದಕ್ಕೆ ಸಂಬಂಧಪಟ್ಟ ವಿಷಯದಲ್ಲೇ ಮುಂದುವರಿಯುತ್ತೇನೆ.
-ಸಿಂಚನಲಕ್ಷ್ಮೀ.

Comments are closed.