ಕರ್ನಾಟಕ

ನಿಖಿಲ್ ಸೋಲಿನ ಭೀತಿ: ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ತರಾಟೆ

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆಯಿಂದಾಗಿ ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯದ ಲೋಕಸಭಾ ಕ್ಷೇತ್ರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾಗಬಹುದೆಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಮೂವರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮಂಡ್ಯ ನಗರ, ಮಳವಳ್ಳಿ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾಗಬಹುದೆಂದು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ.

ಈ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕ್ಷೇತ್ರಗಳ ಜೆಡಿಎಸ್ ಶಾಸಕರಾದ ಎಂ. ಶ್ರೀನಿವಾಸ್, ಅನ್ನದಾನಿ ಹಾಗೂ ತಮ್ಮಣ್ಮ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಏನಾದರೂ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾದರೆ ನೀವೆ ಜವಾಬ್ದಾರಿ ಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಮೂರು ಕ್ಷೇತ್ರಗಳಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹಾಗಾಗಿ ಹಿನ್ನಡೆಯಾಗಬಹುದೆಂಬ ಅಂಶವೂ ಗುಪ್ತಚರ ವರದಿಯಲ್ಲಿದ್ದು, ಈ ಬಗ್ಗೆಯೂ ಕುಮಾರಸ್ವಾಮಿ ಮೂವರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಜಿದ್ದಾಜಿದ್ದಿನ ಹೋರಾಟವೇ ಏರ್ಪಟ್ಟಿತ್ತು.

ಸುಮಲತಾ ಅಂಬರೀಷ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಬ್ಬರದ ಪ್ರಚಾರ ನಡೆಸಿದ್ದರು.ನಿಖಿಲ್ ಕುಮಾರಸ್ವಾಮಿ ಪರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಹಾಗಾಗಿ ಈ ಕ್ಷೇತ್ರದ ಫಲಿತಾಂಶ ಏನಾಗುತ್ತದೆಯೋ ಎಂಬುದನ್ನುಇಡೀ ದೇಶದ ಜನತೆಯೇ ಕುತೂಹಲದಿಂದ ಕಾಯುತ್ತಿದೆ .

Comments are closed.