ಕರಾವಳಿ

ಚುನಾವಣಾ ಅಕ್ರಮ ತಿಳಿಸಲು ಭಯವೇಕೆ..? ಸಿ ವಿಜಿಲ್ ಬಳಸಿ, ದೂರು ನೀಡಿ!

Pinterest LinkedIn Tumblr

ವಿಶೇಷ ವರದಿ- ಚುನಾವಣೆಯಲ್ಲಿ ಯೋಗ್ಯ , ಪ್ರಾಮಾಣಿಕ ಅಭ್ಯರ್ಥಿ ಜಯ ಗಳಿಸಬೇಕು ಎನ್ನುವ ಅಭಿಲಾಷೆ ಹೊಂದಿರುವ ಮತದಾರರೇ , ತಮ್ಮ ಮುಂದೆಯೇ ಅಪ್ರಾಮಾಣಿಕ ವ್ಯಕ್ತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಾ, ಪ್ರಾಮಾಣಿಕ ಅಭ್ಯರ್ಥಿಯನ್ನು ಸೋಲಿಸಲು ಮಾಡುತ್ತಿರುವ ಅಕ್ರಮ ಚಟುವಟಿಕೆಗಳನ್ನು ಕಂಡು ಏನು ಮಾಡದೇ ಸುಮ್ಮನಿರುವಿರಾ ಅಥವಾ ಈತನ ವಿರುದ್ದ ಯಾರಿಗೆ ದೂರು ನೀಡುವುದು, ನಾವು ನೀಡಿದ ದೂರಿನ ವಿರುದ್ದ ಸರಿಯಾದ ಕ್ರಮ ಕೈಗೊಳ್ಳಲು ಸಾಧ್ಯವೇ, ಅದೂ ತ್ವರಿತಗತಿಯಲ್ಲಿ ಸಾಧ್ಯವೇ ಎಂಬ ಗೊಂದಲದಲ್ಲಿದ್ದೀರಾ…? – ಚಿಂತೆ ಬಿಡಿ, ನಿಮಗಾಗಿ ಚುನಾವಣೆಯಲ್ಲಿ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸದಾ ಜಾಗೂರೂಕತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಚುನಾವಣಾ ಆಯೋಗ ವಿ ವಿಜಿಲ್ ( c-vijil) ಎಂಬ ವಿನೂತನ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಕೇವಲ 100 ನಿಮಿಷದಲ್ಲಿ ನೀವು ನೀಡಿದ ದೂರಿನ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ನಿಮ್ಮ ಮೊಬೈಲ್ ಗೆ ಮಾಹಿತಿ ಬರಲಿದೆ.

ದೂರು ನೀಡಲು ಯಾವುದೇ ಕಚೇರಿಗೆ ಅಲೆಯಬೇಕಿಲ್ಲ, ಅಧಿಕಾರಿಗಳನ್ನು ಹುಡುಕಬೇಕಿಲ್ಲ, ಪತ್ರ ಬರೆಯಬೇಕಿಲ್ಲ , ಅತ್ಯಂತ ಸುಲಭದಲ್ಲಿ ಅತೀ ಶೀಘ್ರದಲ್ಲಿ ತಾವು ಇರುವ ಸ್ಥಳದಿಂದಲೇ ದೂರು ನೀಡಬಹುದಾಗಿದ್ದು, ತಾವು ನೀಡಿದ ದೂರು ಕುರಿತು ಪ್ರತಿ ವಿವರಗಳನ್ನು ನಿಮ್ಮ ಮೊಬೈಲ್ ನಲ್ಲಿ ವೀಕ್ಷಿಸಬಹುದು. ನೀವು ಮಾಡಬೇಕಾದ್ದು ಇಷ್ಟೇ, ತಮ್ಮಲ್ಲಿರುವ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಸಿ ವಿಜಿಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು, ತಮ್ಮ ಪರಿಸರದಲ್ಲಿ ಕಂಡು ಬರುವ ಯಾವುದೇ ರೀತಿಯ ಚುನಾವಣಾ ಅಕ್ರಮಗಳ ಕುರಿತು ಪೋಟೋ ಅಥವಾ ವೀಡಿಯೋವನ್ನು ಅಪ್ ಲೋಡಿ ಮಾಡಿದರೆ ಸಾಕು, ಕೂಡಲೇ ನಿಮ್ಮ ದೂರು ಸ್ವೀೀಕಾರವಾದ ಕುರಿತು ನಿಮ್ಮ ಮೊಬೈಲ್ ಗೆ ಸಂದೇಶ ಬರಲಿದೆ.

ನಿಮ್ಮ ದೂರು ಸ್ವೀಕರಿಸಲು ನಿಯೋಜಿಸಲಾಗಿರುವ ವಿವಿಧ ಅಧಿಕಾರಿಗಳು ತಕ್ಷಣದಲ್ಲಿ ಕಾರ್ಯೊನ್ಮೂಕರಾಗಿ ಪರಿಶೀಲನೆ ನಡೆಸಲಿದ್ದಾರೆ, ತಾವು ನೀಡಿದ ದೂರು ಸರಿಯಾಗಿದ್ದರೆ ಸಂಬಂದಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ. ಅದೂ ಕೇವಲ 100 ನಿಮಿಷದಲ್ಲಿ ನೀವು ನೀಡಿದ ದೂರು ವಿಲೇವಾರಿ ಆಗಲಿದೆ, ಒಂದು ವೇಳೆ ಅ ದೂರು ಕುರಿತುಹೆಚ್ಚಿನ ತನಿಖೆಯ ಅಗತ್ಯವಿದ್ದಲ್ಲಿ ಬೇಕಾಗಬಹುದಾದ ಕಾಲಾವಕಾಶದ ಬಗ್ಗೆ ಸಹ ತಮಗೆ ಮೊಬೈಲ್ ಗೆ ಮಾಹಿತಿ ಬರಲಿದೆ. ನೀವು ದೂರು ನೀಡಿದ ಕುರಿತಂತೆ ಸಮಯ ಮತ್ತು ಸ್ಥಳದ ಜಿಪಿಸ್ ಲೊಕೇಷನ್ ಈ ಆಪ್ ನಲ್ಲಿ ನಮೂದಾಗಿರುವುದರಿಂದ, ಆ ಸ್ಥಳಕ್ಕೆ ಸಮೀಪದಲ್ಲಿರುವ ಅಧಿಕಾರಿಗಳ ತಂಡ ನಿಗಧಿತ ಅವಧಿಯೊಳಗೆ ಭೇಟಿ ನೀಡಿ , ಪರಿಶೀಲನೆ ನಡೆಸಲಿದ್ದಾರೆ.

ಹಣ ಹಂಚುವಿಕೆ, ಮದ್ಯ ಹಂಚುವಿಕೆ, ಉಡುಗೊರೆಗಳ ಆಮಿಷ, ಜನಾಂಗೀಯ ಭಾವನೆ ಕೆರಳಿಸುವ ಭಾಷಣ, ಪೇಯ್ಡ್ ನ್ಯೂಸ್ ಪ್ರಕಟ , ಸುಳ್ಳು ಸುದ್ದಿ ಪ್ರಕಟ, ಬೆದರಿಕೆ ಹಾಕುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಮಾದರಿನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ದ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಏನು ಕ್ರಮ ಕೈಗೊಳ್ಳುತ್ತಾರೆ: ಸೀಜ್ ಮಾಡುವ ಪ್ರಕರಣವಾಗಿದಲ್ಲಿ ಸಂಂಬದಪಟ್ಟ ವಸ್ತುಗಳನ್ನು ಸೀಜ್ ಮಾಡಲಿದ್ದಾರೆ, ಕ್ರಿಮಿನಲ್ ಪ್ರಕರಣವಾಗಿದ್ದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಎಫ್.ಐ.ಆರ್ ದಾಖಲಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು, ಈ ಪ್ರಭುಗಳು ಆಯ್ಕೆ ಮಾಡಿದವರೇ ಮುಂದೆ ಸರ್ಕಾರದಲ್ಲಿ ಮತದಾರರ ಅಧಿಕಾರ ನಡೆಸುವವರು, ತಮ್ಮ ಪರವಾಗಿ ಕೆಲಸ ಮಾಡುವ ಯೋಗ್ಯ , ಪ್ರಾಮಾಣಿಕ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾದ ಮತದಾರರು, ಈ ಸಿ ವಿಜಲ್ ಆಪ್ ಮೂಲಕ , ಚುನಾವಣೆಗೆ ನಿಂತ ಸಮರ್ಥ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಿ ವಿಜಿಲ್ ಮೂಲಕ 48 ದೂರು ಗಳನ್ನು ಸ್ವೀಕರಿಸಿದ್ದು, ಪ್ರಸ್ತುತ ಚುನಾವಣಾ ನಾಮಪತ್ರ ಸಲ್ಲಿಕೆ ಮುಗಿದು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ನಿರ್ಧಾರವಾಗಿರುವುದರಿಂದ, ಚುನಾವಣಾ ಪ್ರಚಾರದ ಭರಾಟೆ ಹೆಚ್ಚಾಗಲಿದ್ದು, ವಿವಿಧ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ ವಿಜಿಲ್ ಆಪ್ ಬಳಸಿ ದೂರು ನೀಡಿದಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಸಾದ್ಯವಾಗಲಿದೆ ಎನ್ನುತ್ತಾರೆ ಸಿವಿಜಿಲ್ ನ ಅಧಿಕಾರಿ ಮಂಜುನಾಥ ಶೆಟ್ಟಿ..

ಇನ್ನೇಕೆತಡ, ಸಿವಿಜಿಲ್ ಡೌನ್ ಲೋಡ್ ಮಾಡಿಕೊಳ್ಳಿ , ಚುನಾವಣಾ ಅಕ್ರಮಗಳ ಕುರಿತು ದೂರು ನೀಡಿ, ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ,ನಿಮ್ಮ ಕೊಡುಗೆ ನೀಡಿ.. ನೀವು ನೀಡುವ ದೂರುಗಳ ಕುರಿತು ಕ್ರಮಕೈಗೊಳ್ಳಲು ಅಧಿಕಾರಿಗಳ ತಂಡ 24*7 ಕಾರ್ಯ ನಿರ್ವಹಿಸುತ್ತಿದೆ.

Comments are closed.