
ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜೈಷ್-ಇ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.
ಪುಲ್ವಾಮಾ ದಾಳಿಯ ಹೊಣೆಯನ್ನು ಜೈಷ್ ಹೊತ್ತುಕೊಂಡಿತ್ತು. ಇದಾದ ನಂತರ ಫೆ.27ರಂದು ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ವಿಶ್ವಸಂಸ್ಥೆಯ ಬಳಿ ಮಸೂದ್ ಅಜರ್ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದವು. ಆದರೆ ಈ ನಿರ್ಧಾರಕ್ಕೆ ಚೀನಾ ಬೆಂಬಲ ಸೂಚಿಸಿಲ್ಲ. ಈ ಮೂಲಕ ಕಳೆದ 10 ವರ್ಷಗಳ ಅವಧಿಯಲ್ಲಿ ಮಸೂದ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿ ಚೀನಾ ಅಡ್ಡಗಾಲು ಹಾಕಿದಂತಾಗಿದೆ.
ಮಸೂದ್ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರ್ಪಡೆ ಮಾಡಿದರೆ ಆತನಿಗೆ ಒಂದು ದೇಶದಿಂದ ಒಂದು ದೇಶಕ್ಕೆ ಪ್ರಯಾಣ ಬೆಳೆಸಲು ನಿರ್ಬಂಧ ಬೀಳುತ್ತದೆ. ಇದಲ್ಲದೆ, ಸಾಕಷ್ಟು ನಿರ್ಬಂಧ ಆತನ ಮೇಲೆ ಹೇರಲಾಗುತ್ತದೆ. ಈ ಅವಕಾಶಕ್ಕೆ ಚೀನಾ ತಡೆ ನೀಡಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಮಸೂದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಮಸೂದ್ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಭಾರತ ಹೇಳಿದೆ.
ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿರುವುದಕ್ಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿ ಎಂದು ಟ್ವಿಟ್ಟರ್ನಲ್ಲಿ ಅಭಿಯಾನ ಆರಂಭಗೊಂಡಿದೆ. ಇತ್ತೀಚೆಗೆ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ 40 ಯೋಧರು ಹುತಾತ್ಮರಾಗಿದ್ದರು. ಇದರಿಂದ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.
Comments are closed.