ಕರ್ನಾಟಕ

ವೀಣಾ ಕಾಶಪ್ಪನವರ್​ ರಾಜೀನಾಮೆಗೆ ಪಟ್ಟು; ಇಂದೂ ಸಹ ಸಭೆಗೆ ಗೈರು

Pinterest LinkedIn Tumblr


ಬಾಗಲಕೋಟೆ: ಕಳೆದೆರಡು ದಿನಗಳಿಂದ ಬಾಗಲಕೋಟೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸ್ಥಾನ ಬದಲಾವಣೆ ಕಸರತ್ತು ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್​ನಲ್ಲಿಯೇ ಎರಡು ಬಣಗಳಾಗಿ ಹೊರಹೊಮ್ಮಿದ್ದು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಒಟ್ಟು 36 ಸದಸ್ಯ ಬಲದ ಜಿಲ್ಲಾ ಪಂಚಾಯತಿಯಲ್ಲಿ 17 ಜನ ಕಾಂಗ್ರೆಸ್ ಸದಸ್ಯರ ಬಲದೊಂದಿಗೆ ವೀಣಾ ಕಾಶಪ್ಪನವರ್ ಅಧ್ಯಕ್ಷೆ ಗದ್ದುಗೆ ಏರಿದ್ದರು. ಇದೀಗ ಕೈ ಸದಸ್ಯರಲ್ಲಿಯೇ ಅಧ್ಯಕ್ಷ ಗಾದಿಗಾಗಿ ಬಂಡಾಯದ ಹಾದಿ ಹಿಡಿದಿದೆ 6 ಜನರ ತಂಡ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಅವರು ಮೊನ್ನೆ ಕರೆದ ಸಭೆಗೂ ಹಾಜರಾಗದ ಅತೃಪ್ತರ ನಡೆ ಗಮನಿಸಿ ಬೆಂಗಳೂರಿಗೆ ಸಭೆಯನ್ನು ಶಿಫ್ಟ್​ ಮಾಡಿದ್ದರು.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆದೇಶದಂತೆ ಸಭೆಗೆ ಎಲ್ಲಾ ಕೈ ಸದಸ್ಯರು ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.ಆದರೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಸಭೆಗೆ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬೆಂಬಲಿತ 11 ಜನರ ತಂಡ ಮಾತ್ರ ಹಾಜರಿದ್ದು,ಇನ್ನುಳಿದ 6 ಜನ ಜಿಲ್ಲಾ ಪಂಚಾಯತ್​ ಸದಸ್ಯರು ಗೈರಾಗಿದ್ದಾರೆ. ಜಿಪಂ ಅಧ್ಯಕ್ಷೆ ರಾಜೀನಾಮೆಗೆ ಪಟ್ಟು ಹಿಡಿದು 6 ಜನ ಸದಸ್ಯರು ಬಾಗಲಕೋಟೆಯಲ್ಲೇ ಉಳಿದುಕೊಂಡಿದ್ದಾರೆ.

ಅಧ್ಯಕ್ಷೆ ಮತ್ತು ಸದಸ್ಯರೊಂದಿಗೆ ಚರ್ಚೆ ನಡೆಸಿದ ಸಿದ್ದರಾಮಯ್ಯ ಅವರು ಫೆಬ್ರವರಿ 5 ಕ್ಕೆ ಸಭೆಯನ್ನು ಮುಂದೂಡಿದ್ದಾರೆ.ಈ ಸಭೆಗೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ನ ಮಾಜಿ ಸಚಿವರು, ಹಾಲಿ ಶಾಸಕರು, ಮುಖಂಡರು ಭಾಗಿಯಾಗುವಂತೆ ಮಾಜಿ ಸಿಎಂ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ಧಾರೆ. ಒಟ್ಟಾರೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್​ ರಾಜೀನಾಮೆ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Comments are closed.