
ಗುರುಗ್ರಾಮ: ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ, ಮುಖ್ಯಮಂತ್ರಿ ಗದ್ದುಗೆಯ ಆಸೆ ಎಲ್ಲವೂ ಸೇರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕಡೆಯ ಸುತ್ತಿನ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು. ಆದರೆ ಈ ಬಾರಿಯೂ ಯಡಿಯೂರಪ್ಪ ಕನಸು ನನಸಾಗುವಂತೆ ಕಾಣುತ್ತಿಲ್ಲ. ಒಂದೆಡೆ ಕಾಂಗ್ರೆಸ್ನ ಅತೃಪ್ತ ಶಾಸಕರ ದಂಡೇ ನಮ್ಮ ಜೊತೆಗಿದೆ ಎಂದು ಹೇಳಿಕೊಂಡಿದ್ದ ಬಿಜೆಪಿ ಪಾಳಯದಲ್ಲಿ ಮೂರು ಶಾಸಕರಿಗಿಂತ ಹೆಚ್ಚು ಮಂದಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಇನ್ನೊಂದೆಡೆ ಬಿಜೆಪಿಯ ನಂಬಿ ಹೋಗಿದ್ದ ಶಾಸಕರಿಗೂ ಬೆರಳೆಣಿಕೆಷ್ಟೂ ಬಂಡಾಯ ಶಾಸಕರು ಇಲ್ಲ ಎಂಬುದನ್ನು ಕಂಡು ಸಿಟ್ಟು ಬಂದಿದೆ.
ಈ ಎಲ್ಲದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹತಾಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಾರಣಕ್ಕಾಗಿಯೇ ಕಡೆಯ ಸುತ್ತಿನ ಸಭೆ ಮುಗಿಸಿ ಬಿಜೆಪಿ ಶಾಸಕರು ಇಂದು ರಾತ್ರಿ ಅಥವಾ ನಾಳೆ ರಾಜ್ಯಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇನ್ನು ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರವನ್ನು ಬಿಜೆಪಿ ಮುಖಂಡರು ತಳೆಯಲಿದ್ದಾರೆ.
ಬಿಜೆಪಿ ಮುಖಂಡರು ಕಾಂಗ್ರೆಸ್ ಅತೃಪ್ತ ಕೆಲವು ಶಾಸಕರನ್ನು ಸಂಪರ್ಕಿಸುವ ವೇಳೆ 15ಕ್ಕಿಂತ ಹೆಚ್ಚು ಶಾಸಕರು ನಮ್ಮೊಡನಿದ್ದಾರೆ, ಹೆಸರನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಮೂರು ಶಾಸಕರು ಬಿಜೆಪಿ ಜತೆ ಮುಂಬೈಗೆ ತೆರಳಿದ್ದರು. ಆದರೆ ಅಲ್ಲಿ ಹೋದ ನಂತರ ಬೆರಳೆಣಿಕೆಯ ಶಾಸಕರು ಮಾತ್ರ ಇದ್ದಾರೆ ಎಂಬುದು ಸ್ಪಷ್ಟವಾಗಿ ಬಿಜೆಪಿ ನಾಯಕರ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಜತೆಗೆ ಅತೃಪ್ತರನ್ನು ಸಂಪರ್ಕಿಸಿರುವ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷ ಬಿಡುವುದಾದರೆ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ಮುಂದಿನ ಆರು ವರ್ಷಗಳ ಕಾಲ ಚುನಾವಣೆಯನ್ನೂ ಎದುರಿಸಲು ಸಾಧ್ಯವಿಲ್ಲ. ನಿಮ್ಮಲ್ಲಿ ಕೆಲವರಿಗೆ ಮಂತ್ರಿ ಪದವಿಯನ್ನು ಕೊಡುವ ಬಗ್ಗೆ ಯೋಚಿಸಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಶಸ್ತ್ರ ತ್ಯಜಿಸಿದ ಸಿ.ಟಿ. ರವಿ?:
ಈ ನಡುವೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಸೋಲನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ. “ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದ ನಡುವಳಿಕೆಯ ಬಗ್ಗೆ ಹಲವು ಅನುಮಾನಗಳು ಹುಟ್ಟುತ್ತವೆ. ಕಾಂಗ್ರೆಸ್ ನಾಯಕರೇ ತೊಟ್ಟಿಲನ್ನು ತೂಗುತ್ತಾ, ಮಗುವನ್ನು ಚಿವುಟುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ವಿನಾಕಾರಣ ಬಿಜೆಪಿಯನ್ನು ದೂರುತ್ತಿದ್ದಾರೆ. ರಾಜ್ಯದ ಜನರನ್ನು ದಾರಿ ತಪ್ಪಿಸುವ ಉದ್ದೇಶ ಬಿಟ್ಟರೆ ಇದರ ಹಿಂದೆ ಇನ್ನಾವ ಸದುದ್ದೇಶವೂ ಇಲ್ಲ,” ಎಂದು ಸಿ.ಟಿ. ರವಿಯವರ ಮಾಧ್ಯಮ ಹೇಳಿಕೆಯ ಪತ್ರ ಆರಂಭವಾಗುತ್ತದೆ.
ಮುಂದುವರೆಯುವ ಅವರು, “ಕಾಂಗ್ರೆಸ್ ಪಕ್ಷದ ನಾಯಕರು ಹೇಳುವ ಪ್ರಕಾರ ಯಾವುದೇ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಹೀಗೆ ಹೇಳುತ್ತಲೇ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಯಲ್ಲೇ ವಿರೋಧಾಭಾಸವಿದೆ. ಈಗಿನ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಸಮ್ಮಿಶ್ರ ಸರ್ಕಾರದ ಅಸಹಜ ಮೈತ್ರಿಯ ಪರಿಣಾಮವೇ ಈಗಿನ ಎಲ್ಲಾ ವಿದ್ಯಮಾನಗಳಿಗೆ ಕಾರಣವಾಗಿದೆ,” ಎಂದಿದ್ದಾರೆ.
ಅತೃಪ್ತ ಶಾಸಕರಿಗೆ ಸಮ್ಮಿಶ್ರ ಸರ್ಕರದಲ್ಲಿ ಏನೇನು ಆಮಿಷ ಒಡ್ಡಲಾಗುತ್ತಿದೆಯೋ ಗೊತ್ತಿಲ್ಲ. ಶಾಸಕರಿಗೆ ಆಮಿಷ ತೋರಿಸಿ ಮೋಸ ಮಾಡಿದ್ದರಿಂದಲೇ ಈಗ ಅತೃಪ್ತ ಶಾಸಕರು ಬಂಡಾಯವೆದ್ದಿದ್ದಾರೆ, ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕಳೆದ ಏಳು ತಿಂಗಳುಗಳಿಂದಲೂ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಸಮಸ್ಯೆಗಳಿಗೆಲ್ಲ ಬಿಜೆಪಿಯನ್ನು ದೂರುವ ಏಕೈಕ ಕಾರ್ಯಸೂಚಿ ಕಾಂಗ್ರೆಸ್ – ಜೆಡಿಎಸ್ನದ್ದಾಗಿದೆ. ಈಗಲೂ ಅದೇ ಪುನರಾವರ್ತನೆಯಾಗುತ್ತಿದೆ, ಎಂದು ಮೈತ್ರಿ ಸರ್ಕಾರದ ಮೇಲೆ ರವಿ ಆರೋಪಿಸಿದ್ದಾರೆ.
ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿ, ಅಪವಿತ್ರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ – ಜೆಡಿಎಸ್ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ಎರಡೂ ಪಕ್ಷಗಳ ಶಾಸಕರಿಗೇ ಈಗ ಈ ಸರ್ಕಾರದಿಂದ ಯಾವುದೇ ಸಾಧನೆ ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದೆ. ಈಗಿನ ಬೆಳವಣಿಗೆ ಕಾಂಗ್ರೆಸ್ – ಜೆಡಿಎಸ್ ಅವಕಾಶವಾದಿ ರಾಜಕಾರಣ ಕಾರಣವೇ ಹೊರತು ಬೇರೇನೂ ಅಲ್ಲ, ಎಂದು ಬಿಜೆಪಿಯನ್ನು ಸಮರ್ಥಿಸಿಕೊಂಡಿದ್ಧಾರೆ.
ಸರ್ಕಾರ ರಚನೆಗೆ ಆಡಳಿತ ಮತ್ತು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಮುಖ್ಯಮಂತ್ರಿಗಳು ಈಗಿನ ಬೆಳವಣಿಗೆಗೆ ರಾಜ್ಯದ ಜನತೆಯನ್ನು ಕ್ಷಮೆ ಯಾಚಿಸಬೇಕು, ಎಂದು ಸಿ.ಟಿ. ರವಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಒಕ್ಕಲಿಗ ಬಲ ಪ್ರದರ್ಶನ: ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದರ ಬೆನ್ನಲ್ಲೇ ಒಕ್ಕಲಿಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆಳಗಿಳಿಸುವ ಯತ್ನಕ್ಕೆ ಬಿಜೆಪಿಯ ಶಾಸಕರಾದ ಡಾ. ಅಶ್ವಥ್ನಾರಾಯಾಣ್ ಕೈ ಹಾಕಿದ್ದಾರೆ ಎಂಬ ಕಾರಣಕ್ಕೆ ಅವರ ಮಲ್ಲೇಶ್ವರಂ ಕಚೇರಿಗೆ ಜೆಡಿಎಸ್ ಬೆಂಬಲಿಗರು ಮುತ್ತಿಗೆ ಹಾಕಿದ್ದರು. ಇದಕ್ಕೆ ಕಾರಣ, ಅಶ್ವಥ್ ನಾರಾಯಣ್ ಕೂಡ ಒಕ್ಕಲಿಗ ಸಮುದಾಯದವರೇ ಎಂಬುದು. ಮುಂಬರುವ ಲೋಕಸಭೆ ಚುನಾವಣೆ ವೇಳೆ ಒಕ್ಕಲಿಗ ಮತಗಳು ಸಂಪೂರ್ಣವಾಗಿ ಬಿಜೆಪಿಯ ವಿರುದ್ಧ ಹೋಗುವ ಸಾಧ್ಯತೆಯೂ ಈಗ ಬಿಜೆಪಿಯನ್ನು ಕಾಡುತ್ತಿರಬಹುದು.
ಈ ಎಲ್ಲಾ ಕಾರಣಗಳನ್ನೂ ಮನಗಂಡಿರುವ ಬಿಜೆಪಿ ನಾಯಕರು ಆಪರೇಷನ್ ಕಮಲದಿಂದ ಯು ಟರ್ನ್ ಪಡೆಯಲು ಪ್ರಚೋದಿಸಿದೆ ಎನ್ನಲಾಗುತ್ತಿದೆ. ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೈಕೊಡವಿ ಎದ್ದು ನಿಂತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲೂ ಸಾಧ್ಯವಾಗಿಲ್ಲ. ಇವೆಲ್ಲವುಗಳಿಂದ ಮತ್ತೆ ಅಧಿಕಾರ ಹಿಡಿಯುವ ಯಡಿಯೂರಪ್ಪ ಅವರ ಕಡೆಯ ಪ್ರಯತ್ನ ನೆಲೆಕಚ್ಚುವ ಸಾಧ್ಯತೆ ಇಮ್ಮಡಿಯಾಗಿದೆ.
Comments are closed.