
ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದ ಬಳಿಕ ಲೋಕಸಭಾ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚೆಚ್ಚು ಗರಿಗೆದರುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ದಾಳಿಯ ತೀವ್ರತೆ ಹೆಚ್ಚಿಸುತ್ತಿವೆ. ಜೊತೆಗೆ ಅಲ್ಲಲ್ಲಿ ವಿಪಕ್ಷಗಳು ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಹೈರಾಣಗೊಳಿಸುತ್ತಿವೆ. ಒಗ್ಗಟ್ಟಿನಲ್ಲಿ ಬಲಿವಿದೆ ಎಂಬುದು ಕೆಲ ಚುನಾವಣೆಗಳಿಂದ ವಿಪಕ್ಷಗಳು ಪಾಠ ಕಲಿತಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಯು ಡೆಡ್ಲಿ ಕಾಂಬಿನೇಶನ್ ಎನಿಸಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಈಗಲೇ ಚುನಾವಣೆ ನಡೆದರೆ ಯಾರು ಗೆಲ್ಲಬಹುದು? ವಿಪಕ್ಷಗಳು ಮೈತ್ರಿ ಇಲ್ಲದೆ ಕಣಕ್ಕಿಳಿದರೆ ಏನಾಗುತ್ತದೆ? ಮೈತ್ರಿ ಮಾಡಿಕೊಂಡು ಸೆಣಸಿದರೆ ಎನಾಗುತ್ತದೆ? ಎಂಬಿತ್ಯಾದಿ ಕುತೂಹಲಗಳು ಮಡುಗಟ್ಟಿವೆ. ಎಬಿಪಿ ನ್ಯೂಸ್ ಮತ್ತು ಸಿವೋಟರ್ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯೊಂದು ಈ ಕುತೂಹಲಗಳನ್ನು ತಣಿಸುವ ಪ್ರಯತ್ನ ಮಾಡಿವೆ.
ಸಮೀಕ್ಷೆ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಮಾಸಿಲ್ಲ. ಶೇ. 42ರಷ್ಟು ಜನರಿಗೆ ಈಗಲೂ ಪ್ರಧಾನಿಯಾಗಿ ಮೋದಿಯನ್ನೇ ಕಾಣುವಾಸೆಯಂತೆ. ಈಗಲೇ ಚುನಾವಣೆಯಾದರೆ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ 291 ಸೀಟುಗಳೊಂದಿಗೆ ಮರಳಿ ಅಧಿಕಾರ ಹಿಡಿಯುತ್ತದೆ. 543 ಸದಸ್ಯಬಲದ ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವುದು 272 ಸ್ಥಾನಗಳು. ಆದರೆ, ಹೀಗಾಗಬೇಕಾದರೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಆರ್ಎಲ್ಡಿ ಪಕ್ಷಗಳು ಉತ್ತರ ಪ್ರದೇಶದಲ್ಲಿ ಮಹಾಮೈತ್ರಿ ಮಾಡಿಕೊಳ್ಳಬಾರದು. ಒಂದು ವೇಳೆ, ಈ ಮೂರು ಪಕ್ಷಗಳು ಒಗ್ಗೂಡಿ ಸೆಣಸಿದರೆ ಎನ್ಡಿಎಗೆ ದಕ್ಕುವುದು ಕೇವಲ 247 ಸ್ಥಾನ ಮಾತ್ರ. ಅಂದರೆ ಬಹುಮತಕ್ಕೆ ಬರೋಬ್ಬರಿ 25 ಸ್ಥಾನಗಳ ಕೊರತೆ ಬೀಳುತ್ತದೆ.
ಅಲ್ಲಿಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದ ಜನಮತವೇ ನಿರ್ಣಾಯಕವಾಗಿರಲಿದೆ ಎಂದು ಈ ಸಿವೋಟರ್ ಸಮೀಕ್ಷೆ ಅಂದಾಜಿಸಿದೆ. ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡರೆ ಉತ್ತರ ಪ್ರದೇಶ ರಾಜ್ಯದ 80 ಸ್ಥಾನಗಳಲ್ಲಿ ಅವು ಬರೋಬ್ಬರಿ 50 ಸ್ಥಾನಗಳನ್ನ ಗೆಲ್ಲುತ್ತವಂತೆ. ಎನ್ಡಿಎಗೆ ದಕ್ಕುವುದು 28 ಮಾತ್ರ. ಕಾಂಗ್ರೆಸ್ ಪಾಲಿಗೆ ಉಳಿಯುವುದು ಅಮೇಠಿ ಮತ್ತು ರಾಯ್ಬರೇಲಿ ಮಾತ್ರವೇ. ಆದರೆ, ಮಹಾಮೈತ್ರಿ ಆಗದೇ ಹೋದಲ್ಲಿ ಬಿಜೆಪಿ ಅಂಡ್ ಟೀಮ್ಗೆ ಬರೋಬ್ಬರಿ 72 ಸೀಟುಗಳು ಸಿಗಲಿವೆ ಎಂದು ಈ ಸಮೀಕ್ಷೆಯು ಹೇಳುತ್ತದೆ.
ಉತ್ತರ ಪ್ರದೇಶದಂತೆ ಮಹಾರಾಷ್ಟ್ರದಲ್ಲೂ ಬಿಜೆಪಿಗೆ ಮೈತ್ರಿ ತಲೆನೋವು ಏರ್ಪಟ್ಟಿದೆ. ಶಿವಸೇನೆ ಜೊತೆಗೆ ಸಂಬಂಧ ಹಳಸಿರುವುದು ಆ ರಾಜ್ಯದಲ್ಲಿ ಬಿಜೆಪಿಯ ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆಯು ಹೇಳುತ್ತಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಳ್ಳದಿದ್ದರೆ ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟವು ಬರೋಬ್ಬರಿ 30 ಸ್ಥಾನಗಳನ್ನ ಗೆಲ್ಲಬಹುದು. ಬಿಜೆಪಿಗೆ ಕೇವಲ 18 ಸ್ಥಾನಗಳು ಮಾತ್ರ ದಕ್ಕಬಹುದೆನ್ನಲಾಗಿದೆ.
ಸಿವೋಟರ್ ಸಮೀಕ್ಷೆ ಮಾಡಿದ ಇತರ ರಾಜ್ಯಗಳಾದ ಬಿಹಾರ, ಗುಜರಾತ್ ಮತ್ತು ಒಡಿಶಾದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಪ್ರಾಪ್ತವಾಗಲಿದೆ.
ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆ ವಿವರ:
ಒಟ್ಟು ಲೋಕಸಭಾ ಕ್ಷೇತ್ರಗಳು: 543
ಬಹುಮತಕ್ಕೆ: 272
ಎಸ್ಪಿ-ಬಿಎಸ್ಪಿ ಮೈತ್ರಿಯಾದರೆ, ಎನ್ಡಿಎಗೆ: 247
ಎಸ್ಪಿ-ಬಿಎಸ್ಪಿ ಮೈತ್ರಿ ಇಲ್ಲವಾದರೆ ಎನ್ಡಿಎಗೆ 291
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಾದರೆ:
ಒಟ್ಟು ಕ್ಷೇತ್ರಗಳು: 80
ಮೈತ್ರಿಕೂಟ: 50
ಎನ್ಡಿಎ: 28
ಕಾಂಗ್ರೆಸ್: 2
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಇಲ್ಲವಾದರೆ:
ಒಟ್ಟು ಕ್ಷೇತ್ರಗಳು: 80
ಎನ್ಡಿಎ: 72
ಎಸ್ಪಿ: 4
ಬಿಎಸ್ಪಿ: 2
ಕಾಂಗ್ರೆಸ್: 2
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯಾಗದಿದ್ದರೆ:
ಒಟ್ಟು ಕ್ಷೇತ್ರಗಳು: 48
ಕಾಂಗ್ರೆಸ್-ಎನ್ಸಿಪಿ: 30
ಬಿಜೆಪಿ: 18
ಬಿಹಾರ:
ಒಟ್ಟು ಕ್ಷೇತ್ರಗಳು: 40
ಎನ್ಡಿಎ: 35
ಮಹಾಮೈತ್ರಿ: 5
ಗುಜರಾತ್:
ಒಟ್ಟು ಕ್ಷೇತ್ರಗಳು: 26
ಬಿಜೆಪಿ: 24
ಕಾಂಗ್ರೆಸ್: 2
ಒಡಿಶಾ:
ಒಟ್ಟು ಕ್ಷೇತ್ರಗಳು: 21
ಎನ್ಡಿಎ: 15
ಬಿಜೆಡಿ: 6
Comments are closed.