ಕರಾವಳಿ

ಗೋ ಕಳ್ಳತನಕ್ಕೆ ಸ್ಕಾರ್ಫಿಯೋ ಬಣ್ಣ, ನಂಬರ್ ಬದಲಿಸಿ ತಿರುಗುತ್ತಿದ್ದ ‘ಹೈಟೆಕ್’ ಗ್ಯಾಂಗ್ ಜಸ್ಟ್ ಮಿಸ್!

Pinterest LinkedIn Tumblr

ಕುಂದಾಪುರ: ಜಾನುವಾರುಗಳನ್ನು ಕಳವು ಮಾಡುವ ಸಲುವಾಗಿ ಸ್ಕಾರ್ಫಿಯೋ ಕಾರಿನ ಬಣ್ಣ ಹಾಗೂ ನಂಬರ್ ಪ್ಲೇಟ್ ಬದಲು ಮಾಡಿ ತಿರುಗುತ್ತಿದ್ದ ಹೈಟೆಕ್ ಗ್ಯಾಂಗ್ ಕೂದಲೆಳೆ ಎಂತರದಲ್ಲಿ ಕುಂದಾಪುರ ಪೊಲೀಸರ ಕೈಯಿಂದ ಎಸ್ಕೆಪ್ ಆಗಿದ್ದು ಸ್ಕಾರ್ಪಿಯೋ ವಾಹನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿನ ಹೋಟೇಲ್ ಒಂದರ ಬಳಿ ಆರು ಮಂದಿ ದಾಂಡಿಗರು ಕೆಂಪು ಬಣ್ಣದ ಸ್ಕಾರ್ಪಿಯೋ ಕರೊಂದನ್ನು ನಿಲ್ಲಿಸಿ ದನ ಕಳವಿಗೆ ಯತ್ನಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಕುಂದಾಪುರ ಪೊಲೀಸರು ಮತ್ತು ಹೊಯ್ಸಳ ಜೀಪ್ ಕಂಡು ಆ ಆರು ಮಂದಿ ಅಲ್ಲಿಂದ ಕಾಲ್ಕಿತ್ತಿದ್ದರು. ಅಲ್ಲಿದ್ದ ಸ್ಕಾರ್ಫಿಯೋ ಪರಿಶೀಲನೆ ನಡೆಸಿದ ಪೊಲೀಸರಿಗೆ ಅದರಲ್ಲಿ ಚೂರಿ, ಮಂಕಿ ಕ್ಯಾಪ್, ನೈಲಾನ್ ಹಗ್ಗ, ಮರದ ಮಣೆ, ಟಾರ್ಪಲ್, ನೈಟ್ ಪ್ಯಾಂಟ್, ಟೀಶರ್ಟ್ ಗಳು ಪತ್ತೆಯಾಗಿದ್ದು ಆ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದ್ದರು.

ವಾಹನದ ಬಣ್ಣವೇ ಬದಲು!
ಇನ್ನು ಪೊಲೀಸ್ ಠಾಣೆಗೆ ಸ್ಕಾರ್ಫಿಯೋ ವಾಹನ ತಂದು ಕೂಲಂಕುಷ ಪರಿಶೀಲನೆ ನಡೆಸುವ ವೇಳೆ ಪೊಲೀಸರೇ ಒಂದು ಕ್ಷಣ ಹೌಹಾರಿದ್ದರು. ಅಸಲಿಗೆ ಆ ಕಾರು ಸಂಪೂರ್ಣ ‘ಫೇಕ್’ ಆಗಿತ್ತು. KA03-MX-4233 ನೋಂದಣಿಯ ಸುಳ್ಳು ನಂಬರ್ ಪ್ಲೇಟ್ ಬಳಕೆ ಕಂಡುಬಂದಿದ್ದು ಅದರ ನಿಜವಾದ ನೋಂದಣಿ ಸಂಖೆ KA18-M- 7826 ಆಗಿತ್ತು. ಅಸಲಿ ನೋಂದಣಿ ಸಂಖ್ಯೆಯ ಈ ಕಾರು ಬೂದು ಬಣ್ಣದ್ದಾಗಿರಬೇಕಿತ್ತು. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸುವಾಗ ಸಂಪೂರ್ಣ ಕಾರಿಗೆ ಕೆಂಪು ಬಣ್ಣದ ಸ್ಟಿಕ್ಕರ್ ಕಟ್ಟಿಂಗ ಮಾಡಿ ಕಾರಿನ ಬಣ್ಣ ಬದಲು ಮಾಡಿದ್ದು ತಿಳಿದಿದೆ. ಇಡೀ ಕಾರನ್ನು ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ ನಾಜೂಕಾಗಿ ಫಿನಿಶಿಂಗ್ ಮಾಡಲಾಗಿತ್ತು.

ಇನ್ನು ಮೂಲಗಳ ಪ್ರಕಾರ ಕೆಲ ದಿನಗಳ ಹಿಂದೆ ಕೋಟೇಶ್ವರ ಭಾಗದಲ್ಲಿ ಸ್ಕಾರ್ಫಿಯೋ ವಾಹನದಲ್ಲಿ ಗೋವುಗಳನ್ನು ಕದ್ದು ಪರಾರಿಯಾಗಿದ್ದು ಅದು ಕೂಡ ಇದೇ ಗ್ಯಾಂಗ್ ಇರಬಹುದೇ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಪರಾರಿಯಾದ ಆರೋಪಿಗಳಿಗಾಗಿ ಕುಂದಾಪುರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.