
ಉಡುಪಿ: ಆರೋಪಿಯಾದ ಉಡುಪಿಯ ಕೊಡವೂರು ನಿವಾಸಿ ನಿರಂಜನ್ ಚಿದಾನಂದ ಭಟ್ ತಾನೇ ಭಾರತ ದೇಶದ ರಾಷ್ಟ್ರಪತಿ ಡಾ: ಎ.ಪಿ.ಜೆ. ಅಬ್ಧುಲ್ ಕಲಾಂ ಎಂದು ವ್ಯವಹರಿಸಿ ಮಾನ್ಯ ಭಾರತ ದೇಶದ ರಾಷ್ಟ್ರಪತಿಗಳ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ: ಎ.ಪಿ.ಜೆ. ಅಬ್ಧುಲ್ ಕಲಾಂರವರ ಸಹಿಯನ್ನು ನಕಲಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಲ್ಲದೆ ಮತ್ತು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿಯಿರುವ “Surf N View” ಎಂಬ ಹೆಸರಿನ ಸೈಬರ್ ಕೆಫೆಯಲ್ಲಿ ಡಾ: ಎ.ಪಿ.ಜೆ. ಅಬ್ಧುಲ್ ಕಲಾಂರವರ ಈ-ಮೇಲ್ ಐ.ಡಿ. ಎಂದು ನಂಬುವಂತೆ ಅವರ ಹೆಸರಿನಲ್ಲಿ ಇನ್ನೊಂದು apj_abdulkalam@in.co ಎಂಬ ಈ-ಮೇಲ್ ಐ.ಡಿ.ಯನ್ನು ತಯಾರಿಸಿ ಅದರ ಮೂಲಕ ಆರೋಪಿಯು ಡಾ:ಎ.ಪಿ.ಜೆ. ಅಬ್ಧುಲ್ ಕಲಾಂರವರಿಗೆ ಕಳುಹಿಸಿಕೊಟ್ಟ ಅಭಿನಂದನಾ ಪತ್ರಕ್ಕೆ ಉತ್ತರವಾಗಿ ಅವರು ಕಳುಹಿಸಿದ್ದ ಕೃತಜ್ಞತಾ ಪತ್ರದಲ್ಲಿದ್ದ ಅವರ ಸಹಿಯನ್ನು ನಕಲಿ ಮಾಡಿ ಮಾನವ ಕುಲಕ್ಕಾಗಿ ಅತ್ಯುನ್ನತ ಸೇವೆಗಳನ್ನು ಮಾಡಿದ ಇಂಜಿನೀಯರ್ಸ್ಗಳಿಗೆ “ಅಮೇರಿಕನ್ ಇಂಜಿನಿಯರಿಂಗ್ ಆರ್ಗನೈಸೇಶನ್” ರವರು ನೀಡಲಾಗುವ ಹೂವೇರ್ ಪ್ರಶಸ್ತಿಗಾಗಿ ಆರೋಪಿಯ ನಾಮಪತ್ರವನ್ನು ಡಾ: ಎ.ಪಿ.ಜೆ. ಅಬ್ಧುಲ್ ಕಲಾಂರವರು ಶಿಫಾರಸ್ಸು ಮಾಡಿ ಕಳುಹಿಸಿರುವಂತೆ ನಂಬಿಸಿ ಕಳುಹಿಸಿದ್ದಲ್ಲದೆ, ಡಾ: ಎ.ಪಿ.ಜೆ. ಅಬ್ಧುಲ್ ಕಲಾಂರವರ ನಕಲಿ ಈ-ಮೇಲ್ ಐ.ಡಿ.ಯಿಂದ ಗೋಸ್ವಾಮಿ ಡಿ. ಯೋಗಿ ನ್ಯೂಯಾರ್ಕ್ ಇವರಿಗೆ ಭಾರತ ದೇಶದಲ್ಲಿರುವ 50 ಎಂ.ಡಬ್ಲ್ಯು ಸೋಲಾರ್ ಥರ್ಮಲ್ ಪ್ಲಾಂಟ್ನ ಪ್ರಾಜೆಕ್ಟ್ ರಿಪೋರ್ಟನ್ನು ಕಳುಹಿಸಿಕೊಡುವಂತೆ ಕೋರಿ ತಾನು ಸೃಷ್ಠಿಸಿದ ದಾಖಲೆಗಳು ನೈಜ ದಾಖಲೆಗಳು ಎಂದು ಬಳಸಿದ್ದಲ್ಲದೆ ತಾನೇ ಭಾರತ ದೇಶದ ರಾಷ್ಟ್ರಪತಿ ಡಾ: ಎ.ಪಿ.ಜೆ. ಅಬ್ಧುಲ್ ಕಲಾಂ ಎಂದು ವ್ಯವಹರಿಸಿ ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದರಿಂದ ಆಗಿನ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗ, ಉಡುಪಿ ಜಿಲ್ಲೆಯ ಪೊಲೀಸ್ ನಿರೀಕ್ಷಕರಾಗಿದ್ದ ಶ್ರೀನಿವಾಸರಾಜ್ ಇವರು ದೂರನ್ನು ನೀಡಿರುತ್ತಾರೆ. ಈ ಪ್ರಕರಣದ ತನಿಖೆಯನ್ನು ಆಗಿನ ಉಡುಪಿ ವೃತ್ತದ ವೃತ್ತ ನಿರೀಕ್ಷಕರಾಗಿದ್ದ ಗಣೇಶ ಹೆಗ್ಡೆರವರು ತನಿಖೆ ನಡೆಸಿ ನಂತರ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಶ್ರೀ ಎಸ್.ವಿ. ಗಿರೀಶ್ ಇವರು ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷಿದಾರರ ಸಾಕ್ಷ್ಯ, ದಾಖಲೆಗಳು ಹಾಗೂ ವಾದವನ್ನು ಆಲಿಸಿ ಆರೋಪಿಯ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಭಾ.ದಂ.ಸಂ ಕಲಂ 419, 465, 468, 469, 471 ರಡಿ 3 ವರ್ಷ ಕಠಿಣ ಸಜೆ ಮತ್ತು ರೂ 7,000/- ದಂಡ, ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಮ್ತಾಜ್ ಮತ್ತು ಈಗಿನ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.