ಕುಂದಾಪುರ: ಹಿರಿಯ ಸಾಮಾಜಿಕ ಧುರೀಣ, ಮಾಜಿ ಶಾಸಕ ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಧಾರ್ಮಿಕ, ಶೈಕ್ಷಣಿಕ, ಉದ್ಯಮ , ಸೇವಾಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಖ್ಯಾತ ಗುತ್ತಿಗೆದಾರ, ಉದ್ಯಮಿ, ಸಮಾಜಾಭಿವೃದ್ಧಿ ಮಾರ್ಗದರ್ಶಿ , ದಾನಿ, ಆರ್.ಎನ್.ಶೆಟ್ಟಿಯವರಿಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಭಟ್ಕಳದ ಮುರ್ಡೇಶ್ವರದಲ್ಲಿ ಜನಿಸಿ, ನಂತರ ಹುಬ್ಬಳ್ಳಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಗುತ್ತಿಗೆದಾರರಾಗಿ ರಾಜ್ಯದ ಹಲವಾರು, ರಸ್ತೆ, ಕಾಲುವೆ, ಅಣೆಕಟ್ಟು, ರೈಲ್ವೆ ಸುರಂಗ, ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಇವರ ನೇತೃತ್ವದ ಕಂಪೆನಿಗಳು ಆರ್.ಎನ್.ಶೆಟ್ಟಿ ಎಂಡ್ ಕಂಪೆನಿ, ನವೀನ್ ಮೆಕೆನೈಸ್ಡ್ ಕನ್ಸ್ಟ್ರಕ್ಷನ್ ಕಂ.ಲಿ., ನವೀನ್ ಹೋಟೇಲ್ಸ್ ಲಿ, ಮುರ್ಡೇಶ್ವರ ಪವರ್ ಕಾರ್ಪೋರೇಶನ್ ಲಿ. ,ಮುರ್ಡೇಶ್ವರ ಸಿರಾಮಿಕ್ಸ್ ಮುಂತಾದವುಗಳು ರಾಜ್ಯದ ಹೆಮ್ಮೆಯ ಕಂಪೆನಿಗಳಾಗಿವೆ.
ಆರ್.ಎನ್.ಶೆಟ್ಟಿ ಗ್ರೂಫ್ ಆಫ್ ಕಂಪೆನೀಸ್ , ಆರ್.ಎನ್.ಶೆಟ್ಟಿಯವರ ಮಾರ್ಗದರ್ಶನದಲ್ಲಿ ನೂರಾರು ಸವಾಲಿನ ಯೋಜನೆಗಳ ಕಾರ್ಯನಿರ್ವಹಿಸಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಆರ್.ಎನ್.ಶೆಟ್ಟಿಯವರು ಸಮಾಜಾಭಿವೃದ್ಧಿ ಕಾರ್ಯದಲ್ಲಿ ಮಾಡಿದ ಸಾಧನೆಗಳು ಹಲವಾರು. ಕುಂದಾಪುರದಲ್ಲೂ ಆರ್.ಎನ್.ಶೆಟ್ಟಿ ಸಭಾಭವನ, ಕಲ್ಯಾಣ ಭವನಗಳನ್ನು ಕಾಣಬಹುದು. ಶಿಕ್ಷಣ ಸಂಸ್ಥೆಗಳನ್ನು ಗಮನಿಸಬಹುದು.
ಮುರ್ಡೇಶ್ವರದ ದೇವಾಲಯದಲ್ಲಿ ಇವರು ಕಟ್ಟಿದ ಬೃಹತ್ ಗೋಪುರ ಹಾಗೂ ಶಿವನ ಪ್ರತಿಮೆ ಜಗತ್ಪ್ರಸಿದ್ದವಾಗಿದೆ.
ಇವರ ಸಾಧನೆಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯಿಂದ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ನೀಡಲಾಗಿದೆ. ಡಿಸೆಂಬರ್ ೮ ರಂದು ಬೈಂದೂರಿನಲ್ಲಿ ಇವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Comments are closed.