ಕರ್ನಾಟಕ

2 ದರೋಡೆ ಪ್ರಕರಣ; ವಾಚ್​ಮ್ಯಾನ್ ಬರ್ಬರ ಹತ್ಯೆ

Pinterest LinkedIn Tumblr


ಕಲಬುರ್ಗಿ: ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ದರೋಡೆ ಪ್ರಯತ್ನಗಳು ನಡೆದಿದ್ದು, ಓರ್ವ ವಾಚ್​ಮ್ಯಾನ್​ನ ಕೊಲೆಯಾಗಿದ್ದರೆ, ಮತ್ತೋರ್ವ ವಾಚ್ ಮ್ಯಾನ್ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಕಲಬುರ್ಗಿಯ ಹೊರವಲಯದ ಕಪನೂರು ಕೈಗಾರಿಕಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಓರ್ವ ವಾಚ್ ಮ್ಯಾನ್​ನ ಬರ್ಬರ ಹತ್ಯೆ ನಡೆದಿದೆ. ಕೈಗಾರಿಕಾ ಪ್ರದೇಶದಲ್ಲಿರುವ ಅಣ್ಣಾರಾವ್ ಪಾಟೀಲ ಎಂಬುವರಿಗೆ ಸೇರಿದ ಸರಡಗಿ ದಾಲ್​ಮಿಲ್​ನಲ್ಲಿ ಕಳ್ಳತನಕ್ಕೆ ಬಂದ ದುಷ್ಕರ್ಮಿಗಳು, ಕಾವಲುಗಾರನನ್ನು ಹತ್ಯೆಗೈದಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಸುಭಾಶ್ಚಂದ್ರ ನಿಗ್ಗುಡಗಿ(60) ಎಂದು ಗುರುತಿಸಲಾಗಿದೆ.

ಭೀಮನಾಳ್ ಗ್ರಾಮದ ಸುಭಾಶ್ಚಂದ್ರ ನಿಗ್ಗುಡಗಿ ಕಳೆದ ಐದು ವರ್ಷಗಳಿಂದ ದಾಲ್ ಮಿಲ್​ನ ವಾಚ್​ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಳ್ಳತನಕ್ಕೆಂದು ಆಗಮಿಸಿದ ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದ ವಾಚ್ ಮ್ಯಾನ್ ಮೇಲೆ ದರೋಡೆಕೋರರು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದಾಲ್ ಮಿಲ್ ಮ್ಯಾನೇಜರ್​ಗೂ ಸುಭಾಶ್ಚಂದ್ರಗೂ ವೈಮಸ್ಸಿತ್ತೆನ್ನಲಾಗಿದೆ. ಮ್ಯಾನೇಜರ್​ನೇ ಈತನ ಕೊಲೆ ಮಾಡಿಸಿರಬಹುದೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ದಾಲ್ ಮಿಲ್ ನಲ್ಲಿ ಯಾವುದೇ ವಸ್ತುಗಳು ಸಿಗದೆ ದರೋಡೆಕೋರರು ಬರಿಗೈಲಿ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ದರೋಡೆಕೋರರ ಕೃತ್ಯ ಇದಾಗಿರಬಹುದೆಂದು ಶಂಕಿಸಿ ಕಲಬುರ್ಗಿ ಎಸ್​ಪಿ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ವೈನ್ ಶಾಪ್​ಗೆ ನುಗ್ಗಿ ವಾಚ್​ಮ್ಯಾನ್ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ಅಫಜಲಪುರ ತಾಲ್ಲೂಕಿನ ಗಬ್ಬೂರು(ಬಿ) ಗ್ರಾಮದಲ್ಲಿ ನಡೆದಿದೆ. ಮಹಾದೇವ ಗುತ್ತೇದಾರ ಎಂಬುವವರಿಗೆ ಸೇರಿದ ವೈನ್ ಶಾಪ್​ಗೆ ನುಗ್ಗಿದ 15ಕ್ಕೂ ಹೆಚ್ಚು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಮಲಗಿದ್ದ ವಾಚ್​ಮ್ಯಾನ್ ಮೇಲೆ ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು, ನಂತರ ಕೌಂಟರ್​ನಲ್ಲಿದ್ದ 11 ಸಾವಿರ ರೂಪಾಯಿ ಹಣ ಮತ್ತು ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.

ದರೋಡೆಕೋರರು ವೈನ್ ಶಾಪ್ ಒಳಗೆ ನುಗ್ಗುವುದು, ವಾಚ್ ಮ್ಯಾನ್ ಮೇಲೆ ಹಲ್ಲೆ ಮಾಡುವುದು, ಕಳ್ಳತನ ಮಾಡುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈನ್ ಶಾಪ್ ಕಳ್ಳತನದ ನಂತರ ಮತ್ತೆರಡು ಅಂಡಿಗಳಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆಸಿದ್ದಾರೆ. ವಾಚ್ ಮ್ಯಾನ್ ಕೊಲೆ ಮತ್ತು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಕಲಬುರ್ಗಿ ಗ್ರಾಮೀಣ ಮತ್ತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments are closed.