
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ದಿನದಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳ ನಡುವೆ ಸಮರ ನಡೆಯುತ್ತಲೇ ಇದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪಾಕ್ ಸರ್ಕಾರವನ್ನು ಕೆಣಕಿದ್ದಾರೆ.
ಕಾಶ್ಮೀರಕ್ಕಾಗಿ ಪಾಕಿಸ್ತಾನ ಇಟ್ಟಿರುವ ಬೇಡಿಕೆಯಿಂದ ಹಿಂದೆ ಸರಿಯಬೇಕು, ಇರುವ ನಾಲ್ಕು ಪ್ರಾಂತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಕಿವಿಮಾತು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ನಮ್ಮ ಪಾಕ್ ಸರ್ಕಾರಕ್ಕೆ ಸ್ವದೇಶವನ್ನೇ ನಿಯಂತ್ರಿಸುವಷ್ಟು ಶಕ್ತಿಯಿಲ್ಲ. ಈ ವೇಳೆ ಭಾರತದ ವಶದಲ್ಲಿರುವ ಜಮ್ಮು-ಕಾಶ್ಮೀರ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಇದು ಅಸಮಂಜಸ ನಡೆಯಾಗಿದ್ದು, ಕೂಡಲೇ ಈ ಬೇಡಿಕೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ದೇಶದ ವಿರುದ್ಧವೇ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಿಡಿಕಾರಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರ ಬೇಕಿಲ್ಲ. ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನೇ ನಿಂಯತ್ರಿಸಲು ಪಾಕ್ ಸರ್ಕಾರಕ್ಕೆ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಪ್ರದೇಶವನ್ನು ತೆಗೆದುಕೊಂಡು ಹೇಗೆ ಆಡಳಿತ ನಡೆಸಲು ಸಾಧ್ಯ ಎಂದು ಶಾಹಿದಿ ಅಫ್ರಿದಿ ಪ್ರಶ್ನಿಸಿದ್ದಾರೆ.
ಅಲ್ಲದೇ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಮ್ಮ ದೇಶವನ್ನು ಮೂಲಭೂತವಾದಿಗಳಿಂದ ಕಾಪಾಡುವಲ್ಲಿ ಎಡವಿದೆ. ದೇಶದ ಏಕತೆಯನ್ನು ತೋರುವಲ್ಲಿ ವಿಫಲವಾಗಿದೆ. ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು. ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳಿಗೆ ನೀಡಬಾರದು. ಜಮ್ಮು-ಕಾಶ್ಮೀರದಲ್ಲಿ ಪ್ರತಿನಿತ್ಯ ಈ ವಿಚಾರಕ್ಕೆ ಸಾಮಾನ್ಯ ಜನ ಸಾಯುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ತಮ್ಮ ನೋವನ್ನು ತೋಡಿಕೊಂಡರು.
ಜಮ್ಮು-ಕಾಶ್ಮೀರ ಜನತೆಯನ್ನು ಬದುಕಲು ಬಿಡಬೇಕು. ಅವರು ನಮ್ಮ ಹಾಗೆಯೇ ಮನುಷ್ಯರು, ಹೀಗಾಗಿ ಮನುಷ್ಯತ್ವ ತೋರುವುದು ನಮ್ಮ ಕರ್ತವ್ಯ. ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಜಮ್ಮು-ಕಾಶ್ಮೀರವನ್ನು ಸೇರ್ಪಡೆ ಮಾಡುವುದು ಬೇಡ. ನಾವು ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸದಿದ್ದರೆ, ಜನ ಪ್ರತಿನಿತ್ಯ ಸಾವು – ಬದುಕಿನ ನಡುವೆ ಜೀವನ ಸಾಗಿಸಬೇಕಾದ ಸ್ಥಿತಿ ಮುಂದುವರೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಅಫ್ರಿದಿ ಈ ಹಿಂದೆಯೂ ನೀಡಿದ್ದರು.
Comments are closed.