ಕುಂದಾಪುರ: ರಾಮನ ಭಜನೆಯನ್ನು ಹಲವರು ಮಾಡುತ್ತಾರೆ. ಆದರೆ ರಾಮನ ಭಜಕರಲ್ಲಿ ಬಹಳ ಉತ್ತಮರು ಹನುಮಂತ ದೇವರು. ಇಡೀ ಜೀವನ ಪೂರ್ತಿ ರಾಮನಿಗೋಸ್ಕರ ತ್ಯಾಗ ಮಾಡಿದ ಮಹಾನುಭಾವರು ಹನುಮಂತ ದೇವರು. ಹನುಮಂತ ದೇವರ ಹಾಡಿಗೆ ಕಲ್ಲು ಕರಗಿದೆ ಎಂದಾದರೆ ಭಕ್ತಿ, ಭಾವನೆಯಿಂದ ಹಾಡಿದಾಗ ಮನುಷ್ಯರು ಮಾತ್ರವಲ್ಲ ನಮ್ಮ ನಡುವಿರುವ ಸಕಲ ವಸ್ತುಗಳು ಕರಗಿ ಬಿಡುತ್ತವೆ. ಯಾವಾಗಾ ಹಾಡಿನಲ್ಲಿ ಭಕ್ತಿ, ಭಾವನೆ ಇರುತ್ತೋ ಆವಾಗಾ ಆ ಹಾಡು ಎಲ್ಲರ ಮನಸ್ಸನ್ನು ಕರಗಿಸುತ್ತೆ. ಭಜನೆಯ ಹಿಂದೆ ಭಕ್ತಿ ಅಡಕವಾಗಿದ್ದರೆ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಅಂತಹ ಶಕ್ತಿ ಭಜನೆಯಲ್ಲಿದೆ ಎಂದು ಉಡುಪಿ ಕಾಣಿಯೂರು ಮಠದ ವಿಧ್ಯಾವಲ್ಲಭತೀರ್ಥ ಸ್ವಾಮೀಜಿ ನುಡಿದರು.
ಅವರು ಬೀಜಾಡಿ – ಗೋಪಾಡಿ ಶ್ರೀರಾಮ ಭಜನಾ ಮಂದಿರ ಇದರ ಅಮೃತಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರಾಮಾಮೃತ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಇಂದಿನ ದಿನಗಳಲ್ಲಿ ಯುವಕರಲ್ಲಿ ಉತ್ಸಾಹ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿರಿಯರೆ ಇರುವುದು ಹೆಚ್ಚು. ಆದರೆ ಬೀಜಾಡಿ-ಗೋಪಾಡಿ ಶ್ರೀರಾಮ ಭಜನಾ ಮಂದಿರ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಯುವಕರೇ ಬಹುಪಾಲು ಇದ್ದದ್ದು ಸಂತೋಷದ ಸಂಗತಿ ಎಂದರು.
ಹೆಚ್ಚಿನ ಕಡೆಗಳಲ್ಲಿ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ದೇವರ ಮೂರ್ತಿಗಳು ಜೊತೆಯಲ್ಲಿರುತ್ತವೆ. ಆದರೆ ಇಲ್ಲಿನ ರಾಮದೇವರ ಪ್ರತಿಮೆ ಜೊತೆ ಸೀತೆ, ಲಕ್ಷ್ಮಣ, ಹನುಮಂತನ ಜೊತೆಗೆ ಭರತ, ಶತ್ರುಘ್ನರ ಮೂರ್ತಿಗಳಿವೆ. ಇದೊಂದು ಭಗವಂತ ಮತ್ತು ಭಕ್ತರ ಸಮಾಗಮದ ಒಂದು ರೂಪವನ್ನು ನಾನು ಈ ಮಂದಿರದಲ್ಲಿ ಕಂಡಿದ್ದೇನೆ ಎಂದರು.
ಭಜನೆ ಎಂದರೆ ತಾಳ ಹಿಡಿದು ಜೋರಾಗಿ ಕೂಗಿ ಮನೆಗೆ ಹೋಗುವುದಲ್ಲ. ಇದಕ್ಕೆ ಮಾತ್ರ ಭಜಮೆ ಸೀಮಿತವಾಗಿಲ್ಲ. ಭಗವಂತನಿಗೆ ನಾನಾ ತರಹದ ಸೇವೆಗಳನ್ನು ಸಲ್ಲಿಸುತ್ತೇವೆ. ಆ ಎಲ್ಲಾ ಸೇವೆಗಳಲ್ಲಿ ಭಜನೆಯೂ ಒಂದು. ಭಜನೆಯಿಂದ ಭಕ್ತಿ ಅರಳುತ್ತದೆ. ಅಂತಹ ಭಜನೆಯನ್ನು ಹಾಡಿದಾಗ ಭಗವಂತನು ಭಾವಪರವಶನಾಗುತ್ತಾನೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಉದ್ಯಮಿ ಎನ್.ಟಿ ಪೂಜಾರಿ, ವಿನಯ್ ಕರ್ಕೇರ, ಭೋಜರಾಜ ಕಿದಿಯೂರು, ಕೆ.ಕೆ ಕಾಂಚನ್, ಗೋಪಾಲಕೃಷ್ಣ ಶೆಟ್ಟಿ, ಶ್ರೀಮತಿ ಸಾಕು, ಶಿವರಾಮ್ ಅಮಿನ್, ಪತ್ರಕರ್ತ ಸುಧಾಕರ ನಂಬಿಯಾರ್, ಬಿ ಹಿರಿಯಣ್ಣ ಮೊದಲಾದವರು ಇದ್ದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್ ನರಸಿಂಹ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಾಮೃತ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಸ್ವಾಗತಿಸಿದರು. ಪತ್ರಕರ್ತ ಕಾರ್ತಿಕ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
Comments are closed.