ರಾಷ್ಟ್ರೀಯ

ಆರ್​ಬಿಐಯಿಂದ 3.6 ಲಕ್ಷ ಕೋಟಿ ರೂ. ಕೇಳಿಲ್ಲ; ಕೇಂದ್ರ 

Pinterest LinkedIn Tumblr


ನವದೆಹಲಿ: ಕೇಂದ್ರ ಸರ್ಕಾರ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಯಿಂದ 3.6 ಲಕ್ಷ ಕೋಟಿ ರೂ. ಗಳನ್ನು ಕೇಳಿಲ್ಲ, ಇದು ಸುಳ್ಳು ಆರೋಪ ಎಂದು ಕೇಂದ್ರ ಶುಕ್ರವಾರ ಸ್ಪಷ್ಟನೆ ನೀಡಿದೆ. ಆರ್ಥಿಕ ಬಂಡವಾಳ ಚೌಕಟ್ಟನ್ನು ರೂಪಿಸುವ ಬಗ್ಗೆ ಆರ್​ಬಿಐ ಜತೆ ಕೇಂದ್ರ ಚರ್ಚೆ ನಡೆಸುತ್ತಿದೆಯೇ ವಿನಃ ಹಣ ಕೇಳಿಲ್ಲ ಎಂದು ಕೇಂದ್ರ ಹೇಳಿದೆ.

“ತಪ್ಪು ಮಾಹಿತಿಯನ್ನು ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಸರ್ಕಾರದ ಅರ್ಥ ವ್ಯವಸ್ಥೆ ಸುಭದ್ರವಾಗಿದೆ. ರೂ. 3.6 ಲಕ್ಷ ಕೋಟಿ ಅಥವಾ ರೂ. 1 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಆರ್​ಬಿಐಗೆ ಕೇಳಿಲ್ಲ. ಇದು ಊಹಾಪೋಹ,” ಎಂದು ಕೇಂದ್ರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್​ ಚಂದ್ರ ಗರ್ಗ್​ ಟ್ವೀಟ್​ ಮಾಡಿದ್ದಾರೆ.

ಸುಭಾಷ್​ ಚಂದ್ರ ಗರ್ಗ್​ ನೀಡಿರುವ ಸ್ಪಷ್ಟೀಕರಣದ ಪ್ರಕಾರ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿರ್ಧರಿಸುವ ಮಾತುಕತೆ ಮಾತ್ರ ಕೇಂದ್ರ ಮತ್ತ ಆರ್​ಬಿಐ ನಡುವೆ ನಡೆಯುತ್ತಿದೆ.

ಸರ್ಕಾರ ಆರ್ಥಿಕ ಸ್ಥಿತಿಯ ಬಗ್ಗೆ ಆತ್ಮವಿಶ್ವಾಸ ಪ್ರದರ್ಶಿಸಿರುವ ಗರ್ಗ್​, ಹಣಕಾಸಿನ ಕೊರತೆಯನ್ನು ಆರ್ಥಿಕ ವರ್ಷಾಂತ್ಯದ ಹೊತ್ತಿಗೆ 3.3 % ತಗ್ಗಿಸುವ ಗುರಿ ಸರ್ಕಾರ ಹೊಂದಿದೆ ಎಂದಿದ್ದಾರೆ.

“ಸರ್ಕಾರದ ಹಣಕಾಸಿನ ಕೊರತೆಯ ಮಟ್ಟ 2013-14ರಲ್ಲಿ 5.1% ಇತ್ತು ನಂತರ ಈ ಮಟ್ಟವನ್ನು ತಗ್ಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 2018-219ರ ಸಾಲಿನಲ್ಲಿ ಹಣಕಾಸಿನ ಕೊರತೆಯ ಪ್ರಮಾಣ 3.3% ಆಗಲಿದೆ. ಆಯವ್ಯಯದ ಮಾರುಕಟ್ಟೆ ಸಾಲ ಒಟ್ಟಾರೆ 70,000 ಕೋಟಿ ರೂ. ಗಳಷ್ಟು ಆಗಿವೆ,” ಎಂದು ಗರ್ಗ್​ ಟ್ವೀಟ್​ ಮಾಡಿದ್ದಾರೆ.

ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್​ ಹಿರಿಯ ಮುಖಂಡ ಪಿ. ಚಿದಂಬರಂ, ಗುರುವಾರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರ ಆರ್​ಬಿಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಈ ಮೂಲಕ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ, ಎಂದು ಆರೋಪಿಸಿದ್ದರು.

“ಆರ್​ಬಿಐಗೆ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಸಲುವಾಗಿ ಆರ್​ಬಿಐ ಜತೆ ಮಾತನಾಡುತ್ತಿದ್ದೇವೆ ಎಂಬ ಮಾತಿನ ತಾತ್ಪರ್ಯವೇನು?,” ಎಂದು ಚಿದಂಬರಂ ಟ್ವೀಟ್​ ಮಾಡಿದ್ದಾರೆ.

ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ಹಣಕಾಸಿನ ಕೊರತೆಯಿಂದ ಸರ್ಕಾರ ಚಿಂತಾಕ್ರಾಂತಗೊಂಡಿದೆ. ಲೋಕಸಭೆ ಚುನಾವಣಾ ವರ್ಷದಲ್ಲಿ (2019) ಹಣಕಾಸು ವೆಚ್ಚವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಸರ್ಕಾರದ ಎಲ್ಲಾ ಬಾಗಿಲುಗಳೂ ಮುಚ್ಚಿಹೋಗಿರುವುದರಿಂದ ಆರ್​ಬಿಐ ಖಜಾನೆಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ, ಅದಕ್ಕಾಗಿಯೇ 1 ಲಕ್ಷ ಕೋಟಿ ರೂ. ಹಣವನ್ನು ವರ್ಗಾಯಿಸುವಂತೆ ಆರ್​ಬಿಐಗೆ ಕೇಳಿದೆ,” ಎಂದು ಆರೋಪಿಸಿದ್ದರು.

ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ಸುಮ್ಮನಾದರೆ ಆರ್​ಬಿಐ ಕಾಯಿದೆ 1934ರ ಸೆಕ್ಷನ್​ 7ರ ಪ್ರಕಾರ ಕೇಂದ್ರ ಸರ್ಕಾರ ಅಪೆಕ್ಸ್​ ಬ್ಯಾಂಕ್​ಗೆ 1 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರದ ಖಾತೆಗೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲು ಮುಂದಾಗಿತ್ತು, ಎಂದು ಚಿದಂಬರಂ ಹೇಳಿದ್ದರು.

“ನವೆಂಬರ್​ 19ರಂದು ಆರ್​ಬಿಐ ಬೋರ್ಡ್​ ಸದಸ್ಯರ ಸಭೆ ನಡೆಯಲಿದೆ. ಆರ್​ಬಿಐ ಬೋರ್ಡ್​ನಲ್ಲಿ ಕೇಂದ್ರ ತಮ್ಮ ಆಯ್ಕೆಯ ಸದಸ್ಯರನ್ನೇ ತುಂಬಿಸಿದೆ. ಆರ್​ಬಿಐ ಖಜಾನೆಯಿಂದ 1 ಲಕ್ಷ ಕೋಟಿ ರೂ. ಸರ್ಕಾರಕ್ಕೆ ವರ್ಗಾವಣೆ ಮಾಡುವ ಕುರಿತು ಸಭೆಯಲ್ಲಿ ಕೇಂದ್ರ ಪ್ರಸ್ತಾವನೆಯನ್ನು ಸಲ್ಲಿಸಲಿದೆ,” ಎಂದು ಚಿದಂಬರಂ ಆರೋಪಿಸಿದ್ದರು.

“ಆರ್​ಬಿಐ ಸರ್ಕಾರದ ಬೇಡಿಕೆಯನ್ನು ಒಪ್ಪಿಕೊಂಡರೆ ಅಥವಾ ಆರ್​ಬಿಐ ಗವರ್ನರ್​ ರಾಜೀನಾಮೆ ನೀಡಿದರೆ, ಅದು ದೇಶದ ಆರ್ಥಿಕ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ,” ಎಂದು ಚಿದಂಬರಂ ಎಚ್ಚರಿಕೆ ನೀಡಿದ್ದರು.

Comments are closed.