
ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಗೆ ಕಾರಣವಾಗುತ್ತೆ ಎಂದೇ ಹೇಳಲಾಗುತ್ತಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ ಭರ್ಜರಿ ಜಯಗಳಿಸಿದ್ದಾರೆ. 97,017 ಮತಗಳನ್ನ ಪಡೆದು ಬಿಜೆಪಿಯ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ಧ 39,480 ಮತಗಳ ಅಂತರದಲ್ಲಿ ಹಿಂದೆಂದೂ ಕಾಣದ ಐತಿಹಾಸಿಕ ದಾಖಲೆಯ ಗೆಲುವು ಸಾಧಿಸಿದ್ದಾರೆ. ಜಮಖಂಡಿಯಲ್ಲಿ 1970 ರಲ್ಲಿ ನಡೆದ ಮೊದಲ ಉಪಕದನದಲ್ಲಿ ಸಂಸ್ಥಾ ಕಾಂಗ್ರೆಸ್ ಶ್ರೀಶೈಲಪ್ಪ ಅಥಣಿ ಕೇವಲ 72 ಮತಗಳಿಂದ ಗೆದ್ದು ಒಂದೇ ದಿನದ ಶಾಸಕರಾಗಿ ಇತಿಹಾಸ ಬರೆದಿದ್ದರು. ಇದೀಗ ನಡೆದ ಎರಡನೇ ಉಪಕದನದಲ್ಲಿ ಆನಂದ್ ನ್ಯಾಮಗೌಡ ದಾಖಲೆ ಮತದ ಅಂತರದಿಂದ ಗೆಲುವು ಸಾಧಿಸಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ.
ಗೆಲುವಿನ ರೂವಾರಿಯಾಗಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಾ| ಜಿ. ಪರಮೇಶ್ವರ್ ತಮ್ಮದೇ ಆದ ಸ್ಟೈಲ್ನಲ್ಲಿ ರಾಜಕೀಯ ತಂತ್ರಗಾರಿಕೆಯನ್ನ ಹೆಣೆದು ಬಿಜೆಪಿಯನ್ನ ಹೀನಾಯವಾಗಿ ಸೋಲಿಸಿ ಮಕಾಡೆ ಮಲಗಿಸಿದ್ದಾರೆ.
ಆನಂದ್ ನ್ಯಾಮಗೌಡ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು:
1) ತಂದೆ ಸಾವಿನಿಂದ ಕ್ಷೇತ್ರದಲ್ಲಿದ್ದ ಅನುಕಂಪದ ಅಲೆ.
2) ಸಿದ್ದರಾಮಯ್ಯನವರ ವರ್ಚಸ್ಸು, ಸ್ವಕ್ಷೇತ್ರದ ಜಿಲ್ಲೆಯಾಗಿರೋದ್ರಿಂದ ಪ್ರಭಾವ.
3) ಕಾಂಗ್ರೆಸ್ ಬಂಡಾಯ ಶಮನಗೊಳಿಸಿ ಒಗ್ಗಟ್ಟಿನ ಮಂತ್ರ ಭೋದಿಸಿದ್ದ ಸಿದ್ದರಾಮಯ್ಯ
4) ತಂದೆ ಸಿದ್ದು ನ್ಯಾಮಗೌಡರ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆ..
5) ಪ್ರತಿಯೊಂದು ಜಾತಿಯ ಕಾಂಗ್ರೆಸ್ ಮುಖಂಡರನ್ನು ಕ್ಷೇತ್ರಕ್ಕೆ ಕರೆತಂದು ಓಟ್ ಗಿಟ್ಟಿಸಿಕೊಂಡಿದ್ದು..
6) ಯಡಿಯೂರಪ್ಪನ ಹಿಂದುತ್ವದ ಮುಂದೆ ಸಿದ್ದರಾಮಯ್ಯ ಜಾತಿ ಅಸ್ತ್ರದ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಗಿದ್ದು.
7) ಬಂಡಾಯ ಶಮನದ ಮಧ್ಯೆಯೂ ಬಿಜೆಪಿ ಒಳಬೇಗುದಿ ಕಾಂಗ್ರೆಸ್ಗೆ ಲಾಭ.
8) ಜಿ.ಪರಮೇಶ್ವರಗೆ ಕ್ಷೇತ್ರದ ಉಸ್ತುವಾರಿ ನೀಡಿವ ಮೂಲಕ ದಲಿತ ಮತಗಳನ್ನ ಸೆಳೆದಿದ್ದು..
9) ಬಿಜೆಪಿಯಲ್ಲಿ ಬಂಡಾಯವೆದ್ದ ನಾಯಕರು ಶಮನಗೊಂಡರೂ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಕುಲಕರ್ಣಿ ಅಸಡ್ಡೆ ಧೋರಣೆ.
ಈ ಎಲ್ಲ ಅಂಶಗಳು ಕಾಂಗ್ರೆಸ್ ಪಕ್ಷದ ಕೈಹಿಡಿದು ದೊಡ್ಡ ಅಂತರದ ಗೆಲುವಿಗೆ ಕಾರಣ ಆಗಿದೆ. ಆನಂದ ನ್ಯಾಮಗೌಡ ದಾಖಲೆ ಅಂತರದಿಂದ ಗೆಲುವು ಸಾಧಿಸಿದರೆ ಸಚಿವರನ್ನಾಗಿ ಮಾಡ್ತೀವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರು ಕ್ಷೇತ್ರದ ಜನತೆಗೆ ಭರವಸೆ ಕೊಟ್ಟಿದ್ದರು. ಈಗ ಆನಂದ ನ್ಯಾಮಗೌಡಗೆ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವರಿಷ್ಠರು ಸಚಿವ ಸ್ಥಾನ ಕೊಟ್ಟರೂ ಕೊಡಬಹುದು ಎಂದಿದ್ದಾರೆ.
ಇನ್ನು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅತ್ಯಂತ ಹೀನಾಯ ಸೋಲು ಕಂಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 2,795 ಮತಗಳ ಅಂತರದಲ್ಲಿ ದಿವಂಗತ ಸಿದ್ದು ನ್ಯಾಮಗೌಡ ವಿರುದ್ಧ ಸೋತಿದ್ದ ಕುಲಕರ್ಣಿ ಈ ಬಾರಿ 57,537 ಮತಗಳನ್ನ ಪಡೆದಿದ್ದು, 39,480 ಮತಗಳ ಭಾರಿ ಅಂತರದಿಂದ ಸೋಲು ಕಂಡಿದ್ದಾರೆ.
ಶ್ರೀಕಾಂತ ಕುಲಕರ್ಣಿ ಸೋಲಿಗೆ ಪ್ರಮುಖ ಕಾರಣಗಳು:
1) ಸಿದ್ದು ನ್ಯಾಮಗೌಡ ಅಕಾಲಿಕ ನಿಧನದಿಂದ ಕಾಂಗ್ರೆಸ್ ಗೆ ಅನುಕಂಪದ ಅಲೆ..
2) ಬಂಡಾಯವೆದ್ದ ನಾಯಕರು ಶಮನಗೊಂಡರೂ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಕುಲಕರ್ಣಿ ಅಸಡ್ಡೆ ಧೋರಣೆ..
3)ಸ್ಥಳೀಯ ಬಿಜೆಪಿ ನಾಯಕರಲ್ಲಿದ್ದ ಒಗ್ಗಟ್ಟಿನ ಕೊರತೆ…
4)ಹಿಂದುತ್ವದ ಅಲೆ ಇದೆ ಎಂಬ ಅತಿಯಾದ ವಿಶ್ವಾಸ…
5) ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಕ್ಕೆ ಮಹತ್ವ ಕೊಡದ ರಾಜ್ಯ ನಾಯಕರು…
6) ಗಮನ ಸೆಳೆದಿದ್ದ ಸಿದ್ದು ನ್ಯಾಮಗೌಡರ ಅಭಿವೃದ್ಧಿ ಕಾರ್ಯಗಳು…
7)ಮೇಲ್ನೋಟಕ್ಕೆ ಅತೃಪ್ತಿ ಶಮನವಾಗಿದ್ರೂ ಒಳಗೊಳಗೇ ಪೆಟ್ಟು ಕೊಟ್ಟ ಅಸಮಾಧಾನ..
8) ಕಾಂಗ್ರೇಸ್ ಪಕ್ಷದ ರಣತಂತ್ರಗಳನ್ನ ನಿರ್ಲಕ್ಷ್ಯ ಮಾಡಿದ್ದ ಬಿಜೆಪಿ ರಾಜ್ಯ ನಾಯಕರು…
9) ಕೇವಲ ಮೋದಿ ಹೆಸರು ಹೇಳಿಕೊಂಡು ಪ್ರಚಾರ ನಡೆಸಿದ್ದ ಬಿಜೆಪಿಗರು..
10) ಬಿಜೆಪಿ ರಾಜ್ಯ ಮಟ್ಟದ ನಾಯಕರ ನಿರ್ಲಕ್ಷ್ಯ, ಅಸಡ್ಡೆ ದೊರಣೆ, ಭಿನ್ನಮತಗಳು..
11) ಮುರುಗೇಶ್ ನಿರಾಣಿ, ಸಹೋದರ, ಸಂಗಮೇಶ್ ನಿರಾಣಿ ಪಕ್ಷದ ಅಭ್ಯರ್ಥಿ ಪರ ಸರಿಯಾಗಿ ಕೆಲಸ ಮಾಡಿಲ್ಲ ಎನ್ನುವ ಮಾತು..
ಈ ಎಲ್ಲ ಅಂಶಗಳು ಬಿಜೆಪಿ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣವಾಗಿವೆ. ಶ್ರೀಕಾಂತ್ ಕುಲಕರ್ಣಿ ಕಳೆದ ಬಾರಿಗಿಂತ ಈ ಬಾರಿ 11 ಸಾವಿರ ಮತಗಳನ್ನು ಹೆಚ್ವಿಗೆ ಪಡೆದಿದ್ದರೂ ಕೂಡ ಕಾಂಗ್ರೆಸ್ಗೆ ಪೈಪೋಟಿ ನೀಡುವಲ್ಲಿ ವಿಫಲವಾಗಿದ್ದಾರೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಹಾಗೂ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ.
Comments are closed.