
ಮಂಗಳೂರು: ಸುರತ್ಕಲ್ ಮುಕ್ಕ ಶ್ರೀನಿವಾಸ ನಗರದ ಶ್ರೀನಿವಾಸ ಆಸ್ಪತ್ರೆ ವತಿಯಿಂದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಹಾಗೂ ಮೂಡುಶೆಡ್ಡೆಯ ದ.ಕ.ಜಿಪಂ ಸರಕಾರಿ ಸಂಯುಕ್ತ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಮೂಡುಶೆಡ್ಡೆಯ ದ.ಕ.ಜಿಪಂ ಸರಕಾರಿ ಸಂಯುಕ್ತ ಪ್ರೌಢಶಾಲೆ ಶಾಲಾ ಮಕ್ಕಳಿಗೆ ಮತ್ತು ಹೆತ್ತವರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಭಾನುವಾರ ಶಾಲೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಶಿಬಿರ ಉದ್ಘಾಟಿಸಿದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಆರ್ಥಿಕವಾಗಿ ಹಿಂದುಳಿದಿರುವ ಜನರು ಹೆಚ್ಚಿರುವ ಮೂಡುಶೆಡ್ಡೆ ಪರಿಸರದಲ್ಲಿ ಇಂತಹ ಶಿಬಿರ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ. ಪರಿಸರದ ಜನತೆ ಶಿಬಿರದ ಪ್ರಯೋಜನ ಪಡೆದುಕೊಂಡು ಆರೋಗ್ಯ ಜಾಗೃತಿಯನ್ನು ಬೆಳೆಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಯಾಗಿದ್ದ ಮುಖ್ಯೋಪಾಧ್ಯಾಯ ಸುಬ್ರಾಯ ಪೈ, ಜನರಲ್ಲಿ ಹಣ ಇಲ್ಲದಿದ್ದರೂ ಆರೋಗ್ಯ ಇರಬೇಕು. ಪರಿಸರದ ಜನತೆಯ ಜತೆ ಶಾಲೆಯ ಮಕ್ಕಳಿಗೆ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ರೀನಿವಾಸ ಆಸ್ಪತ್ರೆಯ ಸಮಾಜಮುಖಿ ಕಾರ್ಯಕ್ಕೊಂದು ನಿದರ್ಶನ, ಜನತೆ ಶಿಬಿರದ ಪ್ರಯೋಜನ ಪಡೆಯಬೇಕೆಂದರು.
ಅತಿಥಿಗಳಾಗಿದ್ದ ಮಂಗಳೂರು ತಾಲೂಕು ಪಂಚಾಯತ್ ಸದಸ್ಯೆ ಕವಿತಾ ದಿನೇಶ್, ಮುಖ್ಯೋಪಾಧ್ಯಾಯಿನಿ ಸವಿತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಕೊಟ್ಟಾರಿ, ಶ್ರೀನಿವಾಸ ಆಸ್ಪತ್ರೆಯ ಡಾ.ಮಹೇಶ್ ಹೆಗ್ಡೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂಭವಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಶುಭ ಕೋರಿದರು.
ಶರಣ್, ಕಿಶೋರ್, ನಿವೇದಿತಾ ಎಂ., ಸಂತೋಷ್, ಹರೀಶ್ ಉಪಸ್ಥಿತರಿದ್ದು ಸಹಕರಿಸಿದರು.ಶ್ರೀನಿವಾಸ ಆಸ್ಪತ್ರೆ ಚೀಫ್ ಮಾರ್ಕೆಂಟಿಂಗ್ ಕನ್ಸಲ್ಟೆಂಟ್ ಭಾಸ್ಕರ ಅರಸ್ ಸ್ವಾಗತಿಸಿ, ವಂದಿಸಿದರು.
ಮಕ್ಕಳ ವಿಭಾಗ, ಸ್ತ್ರೀರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ವೈದ್ಯಕೀಯ, ಎಲುಬು ಮತ್ತು ಕೀಲು, ಶ್ವಾಸಕೋಶ, ಶಸ್ತ್ರಚಿಕಿತ್ಸಾ ವಿಭಾಗ ಸೇರಿದಂತೆ ಎಂಟು ವಿಭಾಗದಲ್ಲಿ ನಡೆದ ಶಿಬಿರದ ಪ್ರಯೋಜನವನ್ನು ಸುಮಾರು 200ಕ್ಕೂ ಅಧಿಕ ಮಂದಿ ಪಡೆದರು.
ಆರೋಗ್ಯ ಕಾರ್ಡ್॒ :
ಈ ಸಂದರ್ಭದಲ್ಲಿ ಶ್ರೀನಿವಾಸ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಶ್ರೀನಿವಾಸ ಆರೋಗ್ಯ ಕಾರ್ಡ್ನ್ನು ಶಾಸಕ ಉಮಾನಾಥ ಕೋಟ್ಯಾನ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜನತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಈ ನಿಟ್ಟಿನಲ್ಲಿ ರಿಯಾಯಿತಿ ದರದ ಆರೋಗ್ಯ ಕಾರ್ಡ್ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಜನತೆ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಳ್ಳ ಬೇಕೆಂದು ಹೇಳಿ ಶಿಬಿರಕ್ಕೆ ಶುಭ ಕೋರಿದರು.
Comments are closed.