ಕರಾವಳಿ

ಭಾರತ ನಿರ್ಮಾಣಕ್ಕೆ ನಮ್ಮ ಭಾಷೆ, ಧರ್ಮ, ಶಿಕ್ಷಣ ಅಡ್ಡಿಯಾಗಬಾರದು: ‘ಮಂಗಳೂರು ಲಿಟ್ ಫೆಸ್ಟ್’ಉದ್ಘಾಟಿಸಿ ಡಾ.ಹೆಗ್ಡೆ

Pinterest LinkedIn Tumblr

ಮಂಗಳೂರು : ರಾಷ್ಟ್ರ ಮಟ್ಟದ ಸಾಹಿತ್ಯ ಉತ್ಸವ ‘ಮಂಗಳೂರು ಲಿಟ್ ಫೆಸ್ಟ್’ ಶನಿವಾರ ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಉದ್ಘಾಟನೆಗೊಂಡಿತ್ತು.

ದಿ ಐಡಿಯಾ ಆಫ್ ಭಾರತ್’ ಎನ್ನುವ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಾಹಿತ್ಯ ಉತ್ಸವಕ್ಕೆ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಡಾ. ವಿನಯ್ ಹೆಗ್ಡೆ, ಆರ್ಗನೈಸರ್ ನ ಪ್ರೊ. ಪ್ರಫುಲ್ಲ ಕೇತ್ಕರ್ ಮತ್ತು ತರಂಗ ವಾರಪತ್ರಿಕೆಯ ಮುಖ್ಯಸ್ಥೆ ಸಂಧ್ಯಾ ಪೈ ಅವರು ಚಾಲನೆ ನೀಡಿದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಧ್ಯಾ ಪೈ ಅವರು, ಭಾರತ ಪ್ರಪಂಚದ ಯಾವ ನಾಗರೀಕತೆಯೂ ಸಾಧಿಸದಷ್ಟು ಸಾಧಿಸಿದೆ. ನಮಗೇ ತಿಳಿಯದ ಇತಿಹಾಸ ಮತ್ತು ಜ್ಞಾನ ಇಲ್ಲಿದೆ. ಆದರೆ ಅವುಗಳನ್ನು ನಮ್ಮ‌ ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಭಾರತ ನಿರ್ಮಾಣಕ್ಕೆ ನಮ್ಮ ಭಾಷೆ, ಧರ್ಮ, ಶಿಕ್ಷಣ ಅಡ್ಡಿಯಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭವ್ಯ ಭಾರತ ನಿರ್ಮಿಸಲು ಅವಕಾಶವಿದೆ. ಅದನ್ನು ಶಾಂತಿಯುತ ಮಾರ್ಗದಲ್ಲಿ ಸಾಧಿಸೋಣ, ಪ್ರಚೋದನಕಾರಿ ಭಾಷಣಗಳು ಇನ್ನೊಬ್ಬರ ಸುಖ, ಸಂತೋಷಕ್ಕೆ ಅಡಿಪಡಿಸಬೇಕಾಗಿಲ್ಲ. ಎಲ್ಲರೂ ಸುಖ, ಸಂತೋಷ, ನೆಮ್ಮದಿಯಿಂದ ಬದುಕಬೇಕೆನ್ನುವುದು ನಮ್ಮ ಗುರಿಯಾಗ ಬೇಕಾಗಿದೆ. ಶ್ರೀ ರಾಮಚಂದ್ರನ ಆದರ್ಶ ಗಳು ನಮಗೆ ಮಾದರಿಯಾಗಬೇಕಾಗಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ತಾರತಮ್ಯ ಧೋರಣೆ ಸಲ್ಲದು. ಮಂಗಳೂರು ನಗರ ದೇಶಕ್ಕೇ ಮಾದರಿಯಾದ ನಗರವಾಗಿದೆ. ಈ ದೇಶದಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಿದೆ ಎಂದು ಡಾ. ವಿನಯ್ ಹೆಗ್ಡೆ ಹೇಳಿದರು.

ಶಬರಿಮಲೆಯ ವಿಚಾರವನ್ನು ಪ್ರಸ್ತಾಪಿಸಿದ ವಿನಯ ಹೆಗ್ಡೆ ಈ ವಿಚಾರದಲ್ಲಿ ನ್ಯಾಯಾಲಯಗಳು ಜನರ ಧಾರ್ಮಿಕ ಭಾವನೆಗಳಿಗೆ ಮನ್ನಣೆ ನೀಡಬೇಕು. ಇದರಲ್ಲಿ ರಾಜಕೀಯವನ್ನು ದೂರ ಇಡಬೇಕು. ದೇಶದಲ್ಲಿ ಎಲ್ಲರಿಗೂ ಆದರ್ಶವಾಗಿರುವ ಪುರುಷೋತ್ತಮನ ದೇವಾಲಯವನ್ನು ನಿರ್ಮಿಸುವುದಕ್ಕೂ ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ ಎಂದ ಅವರು ಜನರ ನಂಬಿಕೆ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಚಲಾವಣೆಯ ಸಂದರ್ಭದಲ್ಲಿ ನ್ಯಾಯಾಲಯಗಳು ಮೂಗು ತೂರಿಸಬಾರದು, ರಾಜಕೀಯದಲ್ಲಿ ಧಾರ್ಮಿಕ ವಿಷಯಗಳನ್ನು ತರಬಾರದು. ಧಾರ್ಮಿಕ ವಿಚಾರಗಳಲ್ಲಿ ರಾಜಕೀಯದ ಮಧ್ಯೆ ಪ್ರವೇಶಿಸಬಾರದು. ಆದರೆ ಅವೆಲ್ಲವೂ ದೇಶದಲ್ಲಿ ಈಗ ನಡೆಯುತ್ತಿರುವುದನ್ನು ಕಂಡಾಗ ನಿಜಕ್ಕೂ ಖೇದಕವಾಗುತ್ತದೆ ಎಂದರು.

ಭಾರತ ಎಂದರೆ ತೇಜಸ್ಸು ಮತ್ತು ಅರಿವು ಎನ್ನುವ ಪರಿಕಲ್ಪನೆಯೊಂದಿಗೆ ನಮ್ಮ ಹಿರಿಯರು ಭಾರತವನ್ನು ಕಟ್ಟಿದ್ದರು. ನಾವು ಕಳೆದುಕೊಂಡ ಅದೇ ತೇಜಸ್ಸು ಮತ್ತು ಅರಿವನ್ನು ಈ ಮೂಲಕ ಮತ್ತೊಮ್ಮೆ ಪಡೆಯೋಣ ಎಂದರು.

ಆರ್ಗನೈಸರ್ ಪತ್ರಿಕೆಯ ಸಂಪಾದಕ ಪ್ರೊ. ಪ್ರಫುಲ್ಲ ಕೇತ್ಕರ್ ಅವರು ಮಾತನಾಡಿ “ನಮ್ಮ ಅನುಭವ ಮತ್ತು ಅನುಭೂತಿಯೇ ಭಾರತ” ಎಂದು ಭಾರತದ ಬಗೆಗಿನ ತಮ್ಮ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದರು. ಇತ್ತೀಚಿಗೆ ಭಾರತ ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದೆ. ವಿಶ್ವಸಂಸ್ಥೆ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಚುನಾವಣೆಗಳಲ್ಲೂ ಸೋತಿಲ್ಲ ಎನ್ನುವುದನ್ನು ಸ್ಮರಿಸಿದರು. ಭಾರತೀಯ ಧರ್ಮ ಪರಿಕಲ್ಪನೆಯನ್ನು ಇತರ ಧರ್ಮಗಳಿಗಿಂತಲೂ ಕೆಳಗಿಡುವಲ್ಲಿ ವಸಾಹತುಶಾಹಿ ವ್ಯವಸ್ಥೆಯಲ್ಲೇ ಓದಿ ಬೆಳೆದ ಬಹುತೇಕ ಬೌದ್ಧಿಕರ ಪ್ರಭಾವವಿದೆ ಎಂದರು.

ಆಧ್ಯಾತ್ಮಿಕ ತಳಹದಿಯ ಡೆಮಾಕ್ರಸಿಯನ್ನು ಪ್ರಪಂಚಕ್ಕೆ ನೀಡಿದ್ದೇ ಭಾರತ ಎನ್ನುವುದನ್ನು ತಿಳಿಸಿದ ಅವರು ಬೇರೆ ಬೇರೆ ಕಾರಣಗಳಿಗಾಗಿ ಇತರ ಧರ್ಮೀಯರು ಭಾರತಕ್ಕೆ ಕಾಲಿಟ್ಟಾಗ ಭಾರತೀಯ ರಾಜರುಗಳು ಅವರ ರೀತಿ ರಿವಾಜುಗಳಿಗನುಗುಣವಾಗಿ ಪ್ರಾರ್ಥಿಸಲು ಜಾಗಗಳನ್ನೊದಗಿಸಿದರು, ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಿಕೊಟ್ಟರು ಎಂದು ಅವರು ಹೇಳಿದರು.

ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವರದಿ ಕೃಪೆ : ವಾಭಾ

Comments are closed.