ರಾಷ್ಟ್ರೀಯ

ನಾಪತ್ತೆಯಾಗಿದ್ದ ನೋಯ್ಡಾ ವಿದ್ಯಾರ್ಥಿ ಐಸಿಸ್​ ಸಂಘಟನೆ ಸೇರ್ಪಡೆ

Pinterest LinkedIn Tumblr


ನೋಯ್ಡಾ: ಒಂದು ವಾರದ ಹಿಂದೆ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ನಾಪತ್ತೆಯಾಗಿ ನಾಲ್ಕೈದು ದಿನಗಳಾದರೂ ಆತನ ಸುಳಿವು ಸಿಕ್ಕಿರದ ಹಿನ್ನೆಲೆಯಲ್ಲಿ ಪೊಲೀಸ್​ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಗಿತ್ತು. ಇದೀಗ ಅದೇ ವಿದ್ಯಾರ್ಥಿ ಉಗ್ರ ಸಂಘಟನೆಯ ಧ್ವಜ ಹಿಡಿದಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಶ್ರೀನಗರ ಮೂಲದ ಅಹ್ತೇಶಂ ಬಿಲಾಲ್​ ಸೋಫಿ ಎಂಬ 17 ವರ್ಷದ ವಿದ್ಯಾರ್ಥಿ ಶಾರದಾ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಡಿಗ್ರಿ ಓದುತ್ತಿದ್ದ. ಅ. 28ರಂದು ದೆಹಲಿಗೆ ಹೋಗಲು ಕಾಲೇಜು ಪ್ರಾಂಶುಪಾಲರಿಂದ ಅನುಮತಿ ಪಡೆದು ಹೋಗಿದ್ದ ಆತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿತ್ತು.

ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ಅಹ್ತೇಶಂನ ಫೋಟೋ ಹರಿದಾಡುತ್ತಿದ್ದು ಐಎಸ್​ಜೆಕೆ​ ಉಗ್ರ ಸಂಘಟನೆ ಧ್ವಜದ ಪಕ್ಕದಲ್ಲಿ ನಿಂತಿರುವ ಫೋಟೋದಿಂದ ಆತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಖಾತರಿಯಾಗಿದೆ. ಕಪ್ಪು ಬಣ್ಣದ ಬಟ್ಟೆ ಧರಿಸಿ, ಐಎಸ್​ಜೆಕೆ​ ಸಂಘಟನೆಯ ಧ್ವಜ ಹಿಡಿದಿರುವ ಫೋಟೋವನ್ನು ಖುದ್ದು ಅಹ್ತೇಶಂ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾನೆ. ಈ ಮೂಲಕ ಆತ ಐಸಿಸ್​ ಸಂಘಟನೆಯ ಸಿದ್ಧಾಂತಗಳಿಂದ ಪ್ರಭಾವಿತನಾಗಿರುವುದು ಸ್ಪಷ್ಟವಾಗಿದೆ.

ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದವರು ಜಮ್ಮು ಕಾಶ್ಮೀರದ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ನೋಯ್ಡಾದಿಂದ ಅಹ್ತೇಶಂ ಸೋಫಿ ಕಾಶ್ಮೀರ ಕಣಿವೆ ಸೇರುವಂತೆ ಪ್ರೇರೇಪಣೆ ನೀಡಿದವರು ಯಾರು? ಆತ ಹೇಗೆ ಆ ಸಂಘಟನೆ ಸೇರಿಕೊಂಡ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಅ. 28ರಂದು ಕಾಲೇಜಿನಿಂದ ಹೊರಟಿದ್ದ ಅಹ್ತೇಶಂ ಬಿಲಾಲ್​ ಸೋಫಿ ತನ್ನ ಅಪ್ಪನಿಗೆ ಕರೆ ಮಾಡಿ ಮಾತನಾಡಿದ್ದ. ಅದೇ ಆತನ ಮೊಬೈಲ್​ನಿಂದ ಹೋದ ಕೊನೆಯ ಕರೆ. ಬಳಿಕ, ಆತ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ದ. ನಂತರ ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇತ್ತೀಚೆಗೆ ಉಗ್ರ ಸಂಘಟನೆಯತ್ತ ಆಕರ್ಷಿತರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇದರ ಮೂಲವನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

Comments are closed.