ಕುಂದಾಪುರ: ಈ ದೇಶದ ಜನರಿಗಾಗಿ ಪ್ರಧಾನಿ ಮೋದಿಯವರು ದಣಿವರಿಯದೆ ಶ್ರಮಿಸುತ್ತಿದ್ದಾರೆ. ಹಲವಾರು ಜನಪರ ಯೋಜನೆಗಳನ್ನು ಜನತೆಗೆ ನೀಡಿ ಉತ್ತಮ ಪ್ರಧಾನಿ ಎಂದು ಕರೆಸಿಕೊಂಡಿದ್ದಾರೆ. ಹಲವಾರು ಸ್ಮಾರಕಗಳನ್ನೂ ನೀಡಿದ್ದಾರೆ. ದೇಶದ ಜನರಿಗಾಗಿ ಇಷ್ಟೆಲ್ಲಾ ಒಳಿತು ಬಯಸುವ ಪ್ರಧಾನಿ ಮೋದಿಯವರು ಜನರ ಹಣವನ್ನು ದುಂದುವೆಚ್ಚ ಮಾಡುವುದಾದರು ಹೇಗೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗ ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತ ಡಾ. ಡೇವಿಡ್ ಪ್ರಾವ್ಲೆ(ವಾಮನ್ದೇವ್ ಶಾಸ್ತ್ರೀ) ಹೇಳಿದರು.
ಅವರು ಪತ್ನಿ ಶಾಂಭವಿ ಜೊತೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಿ ಮೂಕಾಂಬಿಕೆ ದರ್ಶನ ಪಡೆದ ಬಳಿಕ ನರೇಂದ್ರ ಮೋದಿ ಆಡಳಿತ ಶೈಲಿ, ಯೋಗದ ಪ್ರಾಮುಖ್ಯತೆ, ಶಬರಿಮಲೆ ವಿಚಾರದ ಕುರಿತು ಮಾಧ್ಯಮದ ಜೊತೆ ಮಾತನಾಡಿದರು.

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಭಾರತದ ಸನಾತನ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದೆ. ಅಲ್ಲದೇ ಭಾರತವನ್ನು ಹೊಸ ಅಧ್ಯಾಯದ ಕಡೆ ಕೊಂಡೊಯ್ಯುತ್ತಿದೆ. ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರ್ಕಾರ ಭಾರತದ ಸಂಪ್ರದಾಯವನ್ನು ನಿರ್ಲಕ್ಷಿಸಿತ್ತು. ಆದರೆ ಈಗೀಗ ಭಾರತವೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಓರ್ವ ಉತ್ತಮ ಮಾರ್ಗದರ್ಶಿ ಹಾಗೂ ಈ ದೇಶದ ಆಸ್ತಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರ ಗುಣಗಾನ ಮಾಡಿದರು.

ಪ್ರಧಾನಿ ಮೋದಿಯವರು ಯಾಕೆ ನಿಮಗೆ ಇಷ್ವಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮೋದೀಜಿಯವರ ಸಾಮರ್ಥ್ಯವನ್ನು ಇಷ್ಟಪಡುತ್ತೇನೆ. ಅವರು ಹೇಗೆ ಭಾರತವನ್ನು ವಿಶ್ವಕ್ಕೆ ಪರಿಚಯಿಸುತ್ತಾರೆ ಆ ದಾರಿ ನನಗೆ ಇಷ್ಟವಾಗುತ್ತೆ. ಮೋದಿ ಒಂದು ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿಲ್ಲ. ಓರ್ವ ಒಳ್ಳೆಯ ನಾಯಕನಾಗಿ ಈ ದೇಶವನ್ನು ಉತ್ತಮ ಆರ್ಥಿಕತೆಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಅಷ್ಟಲ್ಲದೇ ಈ ದೇಶದ ಎಲ್ಲಾ ಸಾಂಪ್ರಾದಾಯಿಕ ಆಚರಣೆಗಳನ್ನು ಕಾಪಾಡುತ್ತಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಎಂದರೆ ನನಗಿಷ್ಟ ಎಂದು ಅವರು ಉತ್ತರಿಸಿದರು.
ಇನ್ನು ತನ್ನ ಭೇಟಿ ಬಗ್ಗೆ ಟ್ವೀಟರಿನಲ್ಲಿ ಬರೆದುಕೊಂಡ ಡೇವಿಡ್, ಭಾರತದಲ್ಲಿ ಮಾತ್ರ ಇಂತಹ ಭವ್ಯವಾದ ಪರಂಪರೆ ಕಾಣಸಿಗುತ್ತದೆ. ಇವುಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಡೇವಿಡ್ ಫ್ರಾವ್ಲೆ ಪತ್ನಿ ಶಾಂಭವಿ ಜೊತೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಿದರು. ಈ ವೇಳೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಹೆಚ್ ಹಾಲಪ್ಪ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ ಮೊದಲಾದವರು ಇದ್ದರು.
Comments are closed.