ಮಂಗಳೂರು, ನವೆಂಬರ್.02: ಮಂಗಳೂರಿನ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ದೇಹ ದಾನ ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ದೇಹದಾನ, ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಿರುವ ದಿನಗಳಲ್ಲಿ ಈಕೆಯೂ ಅಂಥದ್ದೇ ಒಂದು ಉದಾಹರಣೆಯನ್ನು ಉಳಿಸಿಹೋಗಿದ್ದಾಳೆ.
ಅಶೋಕನಗರದ ನಿವಾಸಿ ಶ್ರೀ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಯವರ ಮುದ್ದಿನ ಸುಪುತ್ರಿ ಕುಮಾರಿ ಪ್ರತೀಕ್ಷಾ ಶಾರದಾ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.
ತನ್ನ ಹತ್ತನೇ ವಯಸ್ಸಿಗೆ ಬಲವಾದ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಾಗ ಪ್ರೋತ್ಸಾಹಕರ, ಹಿತೈಷಿಗಳ ಹಾಗೂ ಶಾಲೆಯ ಸಹಕಾರದಿಂದ ಆ ಕಾಯಿಲೆಯನ್ನು ಎದುರಿಸಿದ್ದರೂ, ಮತ್ತೆ ಆ ಕಾಯಿಲೆ ಆ ಮಗುವನ್ನು ನಿನ್ನೆಯ ದಿನ ಆಸ್ಪತ್ರೆಯಲ್ಲಿ ಬಲಿಪಡೆದುಕೊಂಡಿತು.
ಕಳೆದ 4 ತಿಂಗಳುಗಳಿಂದ ತೀವ್ರವಾಗಿ ಬಾದಿಸಿಸುತ್ತಿದ್ದ ಕಾಯಿಲೆಯಿಂದಾಗಿ ಶಾಲೆಗೆ ಹಾಜರಾಗಲು ಅಸಾಧ್ಯವಾದರೂ ಶಾಲೆಯ ಶಿಕ್ಷಕರು ಪ್ರತೀಕ್ಷಳ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದರು.
ಈ ಮಧ್ಯೆ ತಾನು ಈ ಕಾಯಿಲೆಯಿಂದ ಬದುಕುಳಿಯುವುದು ಅಸಾಧ್ಯವೆಂಬುದನ್ನು ಅರಿತ ಆ ಮುಗ್ಧ ಬಾಲೆ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರ ಕರೆದು, ಅಮ್ಮಾ.. ಒಂದು ವೇಳೆ ನನ್ನ ಆತ್ಮ ದೇವರಿಗೆ ಪ್ರಿಯವಾದರೆ, ನನ್ನ ಅಂತ್ಯಸಂಸ್ಕಾರ ಮಾಡದೆ ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಎಂದು ನಿವೇದಿಸಿಕೊಂಡಳು.
ದಿಗ್ರಮೆಗೊಂಡ ತಾಯಿ ಮೂಕವಿಸ್ಮಿತರಾಗಿ ಮೂರ್ಚೆಹೋದರು. ಹೀಗೆ ಹೇಳಿ ಎರಡೇ ದಿವಸಕ್ಕೆ ಪ್ರತೀಕ್ಷ ದೇವರ ಪಾದ ಸೇರಿದಳು. ಮಗುವಿನ ಕೊನೆಯ ಇಚ್ಛೆಯಂತೆ ತಂದೆ ತಾಯಿ ಬಂಧು ಬಳಗದವರು ನಿನ್ನೆ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದರು.
ಮಗುವಿನ ಅಂತಿಮ ದರ್ಶನ ಪಡೆಯಲು ಬಂದ ಶಾರದಾ ವಿದ್ಯಾಲಯದ ಮುಖ್ಯಸ್ಥರಾದ ಎಂ.ಬಿ ಪುರಾಣಿಕ್ ಸಂತಾಪ ಸೂಚಕ ಮಾತನ್ನಾಡಿದಾಗ ಅಂತಿಮ ದರ್ಶನಕ್ಕೆ ಆಗಮಿಸಿದ ಬಂಧು ವರ್ಗದವರಿಗೆ, ಶಾಲಾ ಸಹಪಾಠಿಯವರಿಗೆ,ಶಾಲಾ ಶಿಕ್ಷಕ ವೃಂದದವರಿಗೆ ಹಾಗೂ ಸ್ಥಳೀಯರಿಗೆ ದು:ಖ ಸಹಿಸಲಾಗದೆ ಅತ್ತುಬಿಟ್ಟರು.
ಪ್ರತೀಕ್ಷಾ ತನ್ನ ಒಡಹುಟ್ಟಿದ ಇಬ್ಬರು ಅಣ್ಣಂದಿರನ್ನು ಹಾಗೂ ಆಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Comments are closed.