ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣಕ್ಕೆ ಖಾಸಗಿ ವಿಧೇಯಕ

Pinterest LinkedIn Tumblr


ನವದೆಹಲಿ: ತೊಂಬತ್ತರ ದಶಕದಿಂದಲೂ ಬಿಜೆಪಿಯ ಪಾಲಿಗೆ ಚುನಾವಣಾ ಅಸ್ತ್ರವಾಗಿರುವ ರಾಮ ಮಂದಿರ ನಿರ್ಮಾಣ ವಿಚಾರ ಈಗ 2019ರ ಚುನಾವಣೆಗೂ ಬಿಜೆಪಿಯ ಪಾಲಿಗೆ ಪ್ರಮುಖ ಅಸ್ತ್ರವಾಗಲಿದೆ. ಆದರೆ, ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಮೋದಿ ಸರಕಾರದಿಂದ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಪ್ರಯತ್ನ ನಡೆದಿಲ್ಲ ಎಂಬ ಟೀಕೆಗಳು ಸಾಕಷ್ಟು ಕೇಳಿಬರುತ್ತಿದೆ. ವಿವಾದವು ಸುಪ್ರೀಂ ಕೋರ್ಟ್ ಅಂಗಣದಲ್ಲಿರುವ ಹಿನ್ನೆಲೆಯಲ್ಲಿ ತನ್ನ ಕೈಯಲ್ಲಿ ಏನೂ ಇಲ್ಲ ಎಂದು ಬಿಜೆಪಿ ಡಿಫೆಂಡ್ ಮಾಡಿಕೊಳ್ಳುತ್ತಿದೆ. ಆದರೆ, ರಾಮ ಮಂದಿರ ನಿರ್ಮಾಣ ಮಾಡುತ್ತೇನೆಂದು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮಾತು ತಪ್ಪಿದೆ ಎಂದು ವಿಪಕ್ಷಗಳೂ ಹರಿಹಾಯುತ್ತಿವೆ. ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಅವರು ಹೊಸ ಬಾಣ ಹೂಡಿದ್ದಾರೆ. ನ್ಯಾಯಾಂಗದ ಬದಲು ರಾಜ್ಯಾಂಗದ ಮೂಲಕ ರಾಮ ಮಂದಿರ ನಿರ್ಮಾಣ ಮಾಡುವ ಹೊಸ ಐಡಿಯಾ ಪ್ರಸ್ತಾಪಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಖಾಸಗಿ ವಿಧೇಯಕವನ್ನ ಲೋಕಸಭೆಯಲ್ಲಿ ಮಂಡಿಸಲು ರಾಕೇಶ್ ಸಿನ್ಹಾ ನಿರ್ಧರಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿ ಅನೇಕ ವಿಪಕ್ಷ ನಾಯಕರಿಗೆ ಟ್ಯಾಗ್ ಮಾಡಿದ್ದಾರೆ.

ರಾಜ್ಯಾಂಗದ ಮೂಲಕವೇ, ಅಂದರೆ ವಿಧೇಯಕ ಅಥವಾ ಸುಗ್ರೀವಾಜ್ಞೆ ಮೂಲಕ ರಾಮ ಮಂದಿರ ನಿರ್ಮಾಣದ ದಾರಿ ಸುಗಮ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಬಲಪಂಥೀಯ ಸಂಘಟನೆಗಳಿಂದ ಇತ್ತೀಚಿನ ದಿನಗಳಿಂದ ಕೇಳಿಬರುತ್ತಿವೆ. ಸುಬ್ರಮಣಿಯನ್ ಸ್ವಾಮಿ ಮೊದಲಾದ ಮುಖಂಡರು ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್​ನ ಕಾರ್ಯಕಾರಿ ಮಂಡಲದ ಸಭೆಯಲ್ಲೂ ಈ ಅಭಿಪ್ರಾಯ ಪ್ರತಿಧ್ವನಿಸಿದೆ. ಸೋಮನಾಥ ಮಂದಿರದ ನಿರ್ಮಾಣಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅನುಸರಿಸಿದಂತೆ ರಾಮ ಮಂದಿರ ವಿಚಾರದಲ್ಲೂ ಕೇಂದ್ರ ಸರಕಾರ ಹೊಸ ಕಾಯ್ದೆ ಜಾರಿಗೆ ತರಬೇಕು ಎಂದು ಆರೆಸ್ಸೆಸ್​ನ ಪರಮೋಚ್ಚ ಮುಖಂಡರೆಲ್ಲರೂ ಒಮ್ಮತದಿಂದ ಅಂಗೀಕರಿಸಿದ್ದಾರೆ.

ಆರೆಸ್ಸೆಸ್​ನ ಚಿಂತಕರಲ್ಲೊಬ್ಬರಾಗಿರುವ ರಾಕೇಶ್ ಸಿನ್ಹಾ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸಿದ್ಧವಾಗಿದ್ದು, ಖಾಸಗಿ ಸದಸ್ಯರ ನಿಧೇಯಕದ ಪ್ರಸ್ತಾಪಕ್ಕೆ ಚಿಂತನೆ ನಡೆಸಿದ್ದಾರೆ. ಆದರೆ, ಬಿಜೆಪಿಯಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿಯನ್ನು ಟೀಕಿಸುತ್ತಾ ಬಂದಿರುವ ಮತ್ತು ವ್ಯಂಗ್ಯವಾಡುತ್ತಾ ಬಂದಿರುವ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಸೀತಾರಾಮ್ ಯಚೂರಿ, ಲಾಲೂ ಪ್ರಸಾದ್ ಯಾದವ್, ಚಂದ್ರಬಾಬು ನಾಯ್ಡು ಅವರೆಲ್ಲರಿಗೂ ಟ್ಯಾಗ್ ಮಾಡಿ ಸಿನ್ಹಾ ಟ್ವೀಟ್ ಮಾಡಿದ್ದಾರೆ. ತನ್ನ ರಾಮ ಮಂದಿರ ವಿಧೇಯಕದ ಬಗ್ಗೆ ಈ ನಾಯಕರ ಅಭಿಪ್ರಾಯವೇನು ಎಂದು ತಾನು ತಿಳಿದುಕೊಳ್ಳಬೇಕಿದೆ. ರಾಮ ಮಂದಿರ ನಿರ್ಮಾಣದ ದಿನಾಂಕ ಯಾವಾಗ ಎಂದು ಕೇಳುವ ಈ ನಾಯಕರು ಈ ವಿಧೇಯಕಕ್ಕೆ ಬೆಂಬಲ ಕೊಡುತ್ತಾರಾ ಇಲ್ಲವಾ ಎಂಬ ಕುತೂಹಲ ತನಗಿದೆ. ಅವರಿಗೆ ಏನಾದರೂ ಹೇಳಬೇಕೆನಿಸಿದರೆ ತಾನು ಅವರನ್ನು ಭೇಟಿ ಮಾಡಿ ಆಲಿಸಲು ಸಿದ್ಧ ಎಂದು ರಾಕೇಶ್ ಸಿನ್ಹಾ ಚಾಟಿ ಬೀಸಿದ್ದಾರೆ.

ಆದರೆ, ರಾಕೇಶ್ ಸಿನ್ಹಾ ಅವರ ಪ್ರಯತ್ನ ಯಶಸ್ವಿಯಾಗುತ್ತದಾ? ಆ ಸಾಧ್ಯತೆ ಬಹುತೇಕ ಇಲ್ಲವೆಂದೂ ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ರಾಜ್ಯಾಂಗದ ದಾರಿಯಲ್ಲಿ ಮಂದಿರ ನಿರ್ಮಾಣಕ್ಕೆ ಯತ್ನಿಸಿದರೆ ಸರ್ವೊಚ್ಚ ನ್ಯಾಯಾಲಯಕ್ಕೆ ಇರಿಸುಮುರುಸಾಗಬಹುದು. ಲೋಕಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚಿರುವುದರಿಂದ ಈ ವಿಧೇಯಕಕ್ಕೆ ಅನುಮೋದನೆ ಸಿಗಬಹುದೆಂದು ನಿರೀಕ್ಷಿಸಬಹುದು. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಸಿಗುವುದು ಅನುಮಾನ.

ಇದು ಬಿಜೆಪಿಗೂ ಗೊತ್ತು. ಆದರೆ, ರಾಕೇಶ್ ಸಿನ್ಹಾ ಅವರಿಡಲಿರುವ ಪ್ರೈವೇಟ್ ಮೆಂಬರ್ಸ್ ಬಿಲ್​ನ ಹಿಂದಿನ ಉದ್ದೇಶವೇ ಬೇರೆ ಇರುವ ಶಂಕೆ ಇದೆ.

ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಯಾವುದೇ ಆತುರ ತೋರುತ್ತಿಲ್ಲ ಎಂದು ಜನರು ಭಾವಿಸಬಾರದು; ಮತ್ತು ಬಿಜೆಪಿ ಪ್ರಯತ್ನಿಸಿದರೂ ವಿಪಕ್ಷಗಳು ಅಡ್ಡಗಾಲು ಹಾಕಿದವು ಎಂದು ಬಿಂಬಿಸುವುದು ಈ ವಿಧೇಯಕದ ಹಿಂದಿನ ಮಾಸ್ಟರ್​ಪ್ಲಾನ್ ಇರಬಹುದು.

ಏನಿದು ಖಾಸಗಿ ಸದಸ್ಯರ ವಿಧೇಯಕ?

ಸಂಸತ್​ನ ಯಾವುದೇ ಹಾಲಿ ಸದಸ್ಯರೂ ವೈಯಕ್ತಿಕವಾಗಿ ಈ ಮಸೂದೆ ಮಂಡನೆ ಮಾಡಬಹುದು. ಆದರೆ, ಪ್ರಸ್ತಾಪವಾದ ಎಲ್ಲಾ ಖಾಸಗಿ ವಿಧೇಯಕಕ್ಕೂ ಅವಕಾಶ ಸಿಗುತ್ತದೆಂದೇನಿಲ್ಲ. ಲಾಟರಿ ಮೂಲಕ ವಿಧೇಯಕಗಳನ್ನ ಆರಿಸಿ ಮಂಡನೆಗೆ ಸಮಯ ನಿಗದಿಪಡಿಸಲಾಗುತ್ತದೆ. ಮಂಡನೆಯಾದಾಗ ಧ್ವನಿ ಮತಗಳ ಚಲಾವಣೆಯಾಗಿ ಬೆಂಬಲ ನಿರ್ಧಾರಿತವಾಗುತ್ತದೆ. ಅಲ್ಲಿ ಸ್ಪಷ್ಟ ನಿರ್ಧಾರ ಬರದಿದ್ದಲ್ಲಿ ಮತದಾನ ಏರ್ಪಡಿಸಲಾಗುತ್ತದೆ. ವಿಧೇಯಕಕ್ಕೆ ಹೆಚ್ಚು ಮತ ಬಂದರೆ ಮಸೂದೆ ಮೇಲೆ ಚರ್ಚೆಗೆ ಅವಕಾಶ ಸಿಗುತ್ತದೆ.

Comments are closed.