ಶ್ರೀನಗರ: ಒಂದು ಕಡೆ, ಮಗಳ ಸಾವಿಗೆ ನ್ಯಾಯ ಕೊಡಿಸಬೇಕೆಂಬ ಹಠ. ಇನ್ನೊಂದು ಕಡೆ, ದುಡ್ಡಿನ ಸಮಸ್ಯೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಊರಿನಿಂದ ಬಹಿಷ್ಕಾರ. ಸದ್ಯಕ್ಕೆ ಕತುವಾದಲ್ಲಿ ಹತ್ಯೆಯಾದ ಬಾಲಕಿಯ ಅಪ್ಪ-ಅಮ್ಮ ಕೋರ್ಟ್ ವಿಚಾರಣೆಗೆ ಹೋಗಲು ತಮ್ಮ ಕುರಿಗಳನ್ನು ಮಾರಿ ಹಣ ಹೊಂದಿಸುತ್ತಿದ್ದಾರೆ.
ಈ ವರ್ಷ ಜನವರಿಯಲ್ಲಿ ಜಮ್ಮು ಕಾಶ್ಮೀರದ ಕತುವಾದ ಗಡಿಯಲ್ಲಿ 8 ವರ್ಷದ ಬಾಲಕಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಕಾಡಿಗೆ ಕುದುರೆಗಳನ್ನು ಕರೆದುಕೊಂಡು ಹೋಗಿದ್ದ ಆಸಿಫಾ ಎಂಬ ಬಾಲಕಿ ವಾಪಾಸ್ ಮನೆಗೆ ಬರಲೇ ಇಲ್ಲ. ಆಕೆಯನ್ನು ಕಾಡಿನಲ್ಲಿ ಅಪಹರಿಸಿದ್ದ ಕಾಮುಕರು ಒಂದು ವಾರಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಬಾಲಕಿಯ ಮೇಲೆ ನಡೆದ ಈ ಅತ್ಯಾಚಾರ ಮತ್ತು ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಬಳಿಕ, ಈ ಪ್ರಕರಣ ಕೋಮುವಾದಿ ಸಂಗತಿಗಳೊಡನೆ ತಳುಕು ಹಾಕಿಕೊಂಡು ವಿವಾದವಾಗಿಯೂ ಮಾರ್ಪಟ್ಟಿತ್ತು. ಆ ಪ್ರಕರಣ ಬೆಳಕಿಗೆ ಬಂದು, ತಪ್ಪಿತಸ್ಥರನ್ನು ಬಂಧಿಸಿ 8-9 ತಿಂಗಳೇ ಕಳೆದಿವೆ. ಆದರೆ, ತಮ್ಮದಲ್ಲದ ತಪ್ಪಿಗೆ ಮುದ್ದಿನ ಮಗಳನ್ನೂ ಕಳೆದುಕೊಂಡು, ಆ ಕೇಸಿನ ವಿಚಾರಣೆಗೆ ಹೋಗಲು ಹಣ ಹೊಂದಿಸಲಾರದೆ ಆಸಿಫಾ ಕುಟುಂಬಸ್ಥರು ಮನೆ-ಜಮೀನು ಮಾರಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ.
ಕಾರ್ಗಿಲ್ನ ತುದಿಯಿಂದ ಸಾಂಬಾ ಕಣಿವೆಯವರೆಗೆ ತಿಂಗಳುಗಟ್ಟಲೆ ನಡೆದುಕೊಂಡು ಸಾಗಿದ ಸಬೀನಾ ಮತ್ತು ಯಾಕೂಬ್ ತಮ್ಮ ಮನೆಯಿಂದ ಕೇವಲ 25 ಕಿ.ಮೀ. ದೂರದಲ್ಲಿದ್ದರು. ಊರಿನೊಳಗೆ ಹೋಗಲು ಧೈರ್ಯವಾಗಲಿ, ಇಷ್ಟವಾಗಲಿ ಇರಲಿಲ್ಲ. ಕಳೆದ ಒಂದು ವಾರದಿಂದ ಅವರು ಕತುವಾದ ರಸಾನ ಎಂಬ ಗ್ರಾಮದ ಹೊರಗೆ ಕಾಯುತ್ತಿದ್ದರು. ಎಲ್ಲಿ ತಮ್ಮ 8 ವರ್ಷದ ಮಗಳ ಮೃತದೇಹ ಸಿಕ್ಕಿತ್ತೋ ಅಲ್ಲಿಗೆ ಒಮ್ಮೆ ಹೋಗಬೇಕೆಂದು ಅವರು ಕಾಯುತ್ತಿದ್ದರು. ಮುಸ್ಲಿಂ ಬಕರ್ವಾಲ ಸಮುದಾಯವನ್ನು ಜಮ್ಮುವಿನಿಂದ ಹೊರಹಾಕಲು ಸಂಚು ರೂಪಿಸಿದ್ದ ಕೆಲ ಹಿಂದುಗಳು ಆಸಿಫಾಳನ್ನು ದೇವಸ್ಥಾನದ ಬಳಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದರು. ಇದರಿಂದ ಬೆದರಿದ್ದ ಬಕರ್ವಾಲ ಸಮುದಾಯದ 35ಕ್ಕೂ ಹೆಚ್ಚು ಕುಟುಂಬಗಳು ಏಳೆಂಟು ತಿಂಗಳ ಹಿಂದೆಯೇ ಆ ಗ್ರಾಮವನ್ನು ಬಿಟ್ಟು ಶಿವಾಲಿಕ್ ಬೆಟ್ಟಕ್ಕೆ ಹೋಗಿ ನೆಲೆಸಿದ್ದರು. ಹೀಗೆ ಆ ಊರನ್ನು ಬಿಟ್ಟು ಹೋಗಿದ್ದವರಲ್ಲಿ ಆಸಿಫಾಳ ತಂದೆ-ತಾಯಿ ಕೂಡ ಸೇರಿದ್ದರು.
ಇದೀಗ, ತಮ್ಮ ಮಗಳ ನೆನಪು ಕಾಡುತ್ತಿದ್ದುದರಿಂದ ಮತ್ತೆ ರಸಾನಕ್ಕೆ ವಾಪಾಸ್ ಬರಲು ಯೋಚಿಸಿದ್ದರು. ಆದರೆ, ಆ ಊರಿನವರು ಯಾರೂ ಬಕರ್ವಾಲ ಸಮುದಾಯವನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಯಾರೊಬ್ಬರೂ ಆಸಿಫಾಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಕೂಡ ಬರಲಿಲ್ಲ. ರಸಾನ ಗ್ರಾಮದೊಳಗೆ ಪ್ರವೇಶ ಮಾಡಿದರೆ ಹೊರದಬ್ಬುವುದಾಗಿ ಬೆದರಿಕೆಯೊಡ್ಡಿದ್ದಾರೆ. ನಮ್ಮ ಕಾರಣಕ್ಕೆ ಅವರ ಕಡೆಯ ಜನರು ಜೈಲಿಗೆ ಹೋಗುವಂತಾಯಿತು ಎಂದು ಅವರು ಕೋಪಿಸಿಕೊಂಡಿದ್ದಾರೆ. ಹಾಗಾಗಿ, ನಾವು ಊರಿನೊಳಗೆ ಹೋಗುವಂತಿಲ್ಲ ಎಂದು ಆಸಿಫಾ ತಾಯಿ ಸಬೀನಾ ಹೇಳುತ್ತಾರೆ.
ಕೋರ್ಟ್ಗೆ ಹೋಗಲು ಹಣವಿಲ್ಲ:
ಕೋರ್ಟ್ನಲ್ಲಿ ಇನ್ನೂ ನನ್ನ ಮಗಳ ಕೇಸಿನ ವಿಚಾರಣೆ ನಡೆಯುತ್ತಿರುವುದರಿಂದ ತಿಂಗಳಿಗೆ ಮೂರ್ನಾಲ್ಕು ಬಾರಿ ಕೋರ್ಟ್ಗೆ ಹೋಗಬೇಕಾಗುತ್ತದೆ. ಪ್ರತಿ ಬಾರಿ ಪೇಟೆಗೆ ಹೋಗುವಾಗಲೂ ನಮ್ಮ ಬಳಿ ಇರುವ ಕುರಿ, ಮೇಕೆಗಳನ್ನು ಮಾರಿ, ಪ್ರಯಾಣಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುತ್ತೇನೆ. ಹಾಗಂತ, ಹಣವಿಲ್ಲ ಎಂದು ನಾನು ನನ್ನ ಮಗಳ ಸಾವಿಗೆ ನ್ಯಾಯ ಕೊಡದಿರಲು ಸಾಧ್ಯವೇ? ನನ್ನ ಎಲ್ಲ ಜಮೀನು, ಮನೆಯನ್ನು ಮಾರಿಯಾದರೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಹೋರಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಈ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಲೇ ಇರುತ್ತೇನೆ ಎಂದು ಆಸಿಫಾಳ ಅಪ್ಪ ಯಾಕೂಬ್ ತಮ್ಮ ಸದ್ಯದ ಪರಿಸ್ಥಿತಿಯನ್ನು ವಿವರಿಸುತ್ತಾರೆ.
ನನ್ನ ಕಂದನನ್ನು ಅಷ್ಟು ಬರ್ಬರವಾಗಿ ಕೊಲೆ ಮಾಡಿದವರನ್ನು ನೇಣಿಗೇರಿಸಲೇಬೇಕು. ಆಗ ಮಾತ್ರ ಅವಳ ಸಾವಿಗೆ ನ್ಯಾಯ ಸಿಗುತ್ತದೆ. ಆದರೆ, ಒಂದುವೇಳೆ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾದರೆ ನಮ್ಮ ಕುಟುಂಬದವರನ್ನು ಈ ಊರಿನ ಜನ ಸಾಯಿಸದೆ ಬಿಡುವುದಿಲ್ಲ. ಈಗಲೇ ನಮ್ಮ ವಿರುದ್ಧ ದ್ವೇಷ ಸಾಧಿಸುತ್ತಿರುವ ಅವರು ಮುಂದೆ ಏನು ಬೇಕಾದರೂ ಮಾಡಬಹುದು ಎಂದು ಆಸಿಫಾಳ ತಾಯಿ ಕಂಬನಿ ಮಿಡಿಯುತ್ತಾರೆ.
ನನ್ನ ಮಕ್ಕಳ ಜೀವಕ್ಕೆ ರಕ್ಷಣೆಯಿಲ್ಲ:
ಸದ್ಯಕ್ಕೆ ಸಬೀನಾ ಮತ್ತು ಯಾಕೂಬ್ ಇಬ್ಬರೇ ಕತುವಾದ ಗಡಿಯಲ್ಲಿ ಬಂದು ನೆಲೆಸಿದ್ದಾರೆ. ನನ್ನ ಚಿಕ್ಕ ಮಗಳನ್ನೇ ಅತ್ಯಾಚಾರವೆಸಗಿ ಕೊಂದವರು ಉಳಿದ ಮಕ್ಕಳನ್ನು ಜೀವಂತವಾಗಿ ಬಿಡುತ್ತಾರೆ ಎಂಬ ನಂಬಿಕೆ ನಮಗಿಲ್ಲ. ಹಾಗಾಗಿ, ಅವರನ್ನು ನಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದೇವೆ ಎಂಬುದು ಅವರಿಬ್ಬರ ಸ್ಪಷ್ಟನೆ. ಈ ಮಾತುಗಳನ್ನು ಕೇಳಿದರೆ ಅಲ್ಲಿನ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ತಿಳಿಯುತ್ತದೆ.
ಆಸಿಫಾ ನನ್ನ ಮುದ್ದಿನ ಮಗಳಾಗಿದ್ದಳು:
ಆಸಿಫಾಳಿಗೆ ಕುರಿ ಮತ್ತು ಮೇಕೆಗಳೆಂದರೆ ಬಹಳ ಪ್ರೀತಿ. ಇಡೀ ದಿನ ಬೇಕಿದ್ದರೂ ಅವುಗಳೊಂದಿಗೆ ಆಟವಾಡಿಕೊಂಡು ಇರುತ್ತಿದ್ದಳು. ಅಮ್ಮನಿಗಿಂತ ನನ್ನನ್ನು ಹೆಚ್ಚು ಹಚ್ಚಿಕೊಂಡಿದ್ದ ಅವಳು ನನ್ನ ಮೈ ಮೇಲೆ ಹತ್ತಿ ಆಟವಾಡುತ್ತಿದ್ದಳು, ತುಂಟಾಟ ಮಾಡುತ್ತಿದ್ದಳು. ಬೇರೆಲ್ಲ ಮಕ್ಕಳಿಗಿಂತ ಅವಳೆಂದರೆ ನನಗೆ ಪ್ರೀತಿ ಜಾಸ್ತಿ. ಹಾಗಾಗಿ, ಬಹಳ ಮುದ್ದಿನಿಂದ ಬೆಳೆಸಿದ್ದೆ. ಅವಳ ದೇಹವನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ನನಗೆ ಅಂದೇ ನಾನು ಸಾಯಬಾರದಾ.. ಅನಿಸಿತ್ತು. ನನ್ನ ಸ್ಥಿತಿಯನ್ನು ನೋಡಿ ನನ್ನ ತಂಗಿ ಆಕೆಯ 6 ತಿಂಗಳ ಮಗುವನ್ನು ನನಗೆ ಕೊಟ್ಟಳು. ಆ ಮಗುವಿನ ಮುಖ ನೋಡುತ್ತಾ ನನ್ನ ನೋವು ಮರೆಯಲಿ ಎಂಬುದು ಅವಳ ಉದ್ದೇಶವಾಗಿತ್ತು. ಆದರೆ, ನನ್ನ ಮಗಳ ದುರಂತ ಸಾವನ್ನು ಮರೆಯುವುದಾದರೂ ಹೇಗೆ?! ಎನ್ನುತ್ತಾರೆ ಯಾಕೂಬ್.
ಆಸಿಫಾ ಸತ್ತಾಗ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಆದರೆ, ಅದ್ಯಾವುದೂ ಈ ಕುಟುಂಬದ ಕೈ ಸೇರಿಲ್ಲ. ಸದ್ಯಕ್ಕೆ 200 ಮೇಕೆ ಮತ್ತು ಕುರಿತಗಳು, 14 ಕುದುರೆಗಳಿವೆ. ರಸಾನದಲ್ಲಿ 2 ಎಕರೆ ಜಮೀನಿದೆ, ಒಂದು ಚಿಕ್ಕ ಮನೆಯಿದೆ. ಆ ಮನೆಯನ್ನು ಮಾರಲು ಯಾಕೂಬ್ ನಿರ್ಧರಿಸಿದ್ದರೂ ಆ ಮನೆ ಬಹಳ ಹಳೆಯದಾದ್ದರಿಂದ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಅದನ್ನು ಕೊಳ್ಳಲು ಬೇರೆ ಸಮುದಾಯದವರು ಅವಕಾಶವನ್ನೂ ನೀಡುವುದಿಲ್ಲ. ಹೀಗಾಗಿ, ಕುಟುಂಬಕ್ಕೆ ಸದ್ಯಕ್ಕೆ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ.
Comments are closed.