
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ವಿರುದ್ಧ ನಟ ಧನಂಜಯ್ ಮತ್ತೆ ಸಿಡಿದಿದ್ದು, 2ನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಪರ ಬ್ಯಾಟ್ ಬೀಸಿದ್ದಾರೆ.
ನಟಿ ಸಂಗೀತಾ ಭಟ್ ವಿರುದ್ಧ ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಗುರುಪ್ರಸಾದ್ರ ಎಲ್ಲಾ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಇವರ ಹೇಳಿಕೆಯಿಂದಾಗಿ ಸಂಗೀತಾ ಭಟ್ ಸೇರಿದಂತೆ ಎರಡನೇ ಸಲ ಚಿತ್ರದಲ್ಲಿ ಕೆಲಸಮಾಡಿದ್ದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದರು.
ನಾನು ಅವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಆದರೂ ಸಹ 2ನೇ ಸಲ ಚಿತ್ರದಲ್ಲಿ ನಟಿಸಿದ್ದರಿಂದ ಈ ಬಗ್ಗೆ ಮಾತನಾಡಲು ಬಯಸುತ್ತೇನೆ. ಸಿನಿಮಾ ತಂಡದಲ್ಲಿ ಗುರುಪ್ರಸಾದ್ ಹೊರತು ಪಡಿಸಿ ಯಾರೂ ಸಹ ಸಣ್ಣ ತಪ್ಪು ಮಾಡಿಲ್ಲ. ಅಲ್ಲದೇ ನಿರ್ಧಿಷ್ಟ ವಿಷಯಕ್ಕೆ ನಿರ್ಮಾಪಕ ಯೋಗೇಶ್ ಗುರುಪ್ರಸಾದ್ಗೆ ಬೈದಿದ್ದರು ಎಂದು ಆಕ್ರೋಶ ಹೊರಹಾಕಿದರು.
ನಿಮಗೆ ನೈತಿಕತೆ ಇದ್ದಿದ್ದರೆ, ನೀವು ಈ ರೀತಿ ಮಾತನಾಡುತ್ತಿರಲಿಲ್ಲ. ಮನುಷ್ಯನಿಗೆ ಅಷ್ಟು ಸೇಡು ಇರಬಾರದು, ನೀವು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರನ್ನು ತುಳಿಯಲು ಯತ್ನಿಸುತ್ತಿದ್ದೀರಿ. ಆದರೆ ನಿಮ್ಮನ್ನು ಸಹ ತುಳಿಯುವವರೂ ಇರುತ್ತಾರೆ. ಇವಾಗಲಾದರೂ ನಾಲ್ಕು ಜನ ನಿಮ್ಮ ಪರವಾಗಿ ಮಾತನಾಡುವವರನ್ನು ಉಳಿಸಿಕೊಳ್ಳಿ. ಈ ರೀತಿಯ ವರ್ತನೆಯನ್ನು ಬಿಟ್ಟು ನೆಮ್ಮದಿಯಾಗಿ ಉಸಿರಾಡುವುದನ್ನು ಕಲಿತುಕೊಳ್ಳಲಿ ಎಂದು ಧನಂಜಯ್ ಕಿಡಿಕಾರಿದರು.
ಒಂದು ವರ್ಷದ ಹಿಂದೆ ಎರಡನೇ ಸಲ ಸಿನಿಮಾದ ವಿಚಾರಕ್ಕೆ ನನ್ನ ವಿರುದ್ಧ ಲೈವ್ ನಲ್ಲಿ ಹರಿಹಾಯ್ದಿದ್ದರು. ನನ್ನನ್ನು ಐರನ್ ಲೆಗ್, ಗೊಡ್ಡಹಸು ಎಂದು ನೇರವಾಗಿ ಆರೋಪಿಸುವ ಮೂಲಕ ಕೆಟ್ಟದಾಗಿ ಮಾತನಾಡಿದ್ದರು. ಅದು ಸಹ ಕಿರುಕುಳವಲ್ಲವೇ, ನಾನು ಸಹ ಅವರಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ. ಎಲ್ಲರೂ ಅವರನ್ನು ಟಿವಿ ಪರದೆಯ ಮೇಲೆ ನೋಡಿರುತ್ತಾರೆ. ಆದರೆ ಅವರನ್ನು ನಾವು ತುಂಬಾ ಹತ್ತಿರದಿಂದ ನೋಡಿದ್ದೇವೆ. ಅವರು ಆಡುವ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
Comments are closed.