ಮನೋರಂಜನೆ

ರಿಷಿ ಚಿತ್ರಕ್ಕೆ ಮಲಯಾಳಿಯ ರೆಬಾ ಮೋನಿಕಾ ಜಾನ್‌ ನಾಯಕಿ

Pinterest LinkedIn Tumblr


“ಆಪರೇಷನ್‌ ಅಲಮೇಲಮ್ಮ’ ನಂತರ ನಟ ರಿಷಿ ಬಿಝಿಯಾಗಿರುವುದು ಗೊತ್ತೇ ಇದೆ. ಸದ್ಯಕ್ಕೆ “ಕವಲು ದಾರಿ’ ಬಿಡುಗಡೆಯ ಎದುರು ನೋಡುತ್ತಿರುವ ರಿಷಿ, ಮೊದಲ ಸಲ ತಮಿಳು ನಟ ಧನುಷ್‌ ಕನ್ನಡದಲ್ಲಿ ನಿರ್ಮಿಸುತ್ತಿರುವ ಹೆಸರಿಡದ ಚಿತ್ರಕ್ಕೆ ಹೀರೋ ಎಂದು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈಗಾಗಲೇ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆಯೇ ನಡೆದು, ಮುಗಿಯುವ ಹಂತಕ್ಕೂ ಬಂದಿದೆ. ಆದರೆ, ಸಿನಿಮಾ ಶುರುವಿಗೆ ಮುನ್ನ, ರಿಷಿಗೆ ನಾಯಕಿಯ ಆಯ್ಕೆಯಾಗಿರಲಿಲ್ಲ.

ಈಗ ಧನುಷ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರವ ಚಿತ್ರಕ್ಕೆ ಮಲಯಾಳಂ ಬೆಡಗಿಯ ಆಗಮನವಾಗಿದೆ. ಹೌದು, ಮಲಯಾಳಂ ಚಿತ್ರರಂಗದ ರೆಬಾ ಮೋನಿಕಾ ಜಾನ್‌ ಅವರು ರಿಷಿಗೆ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತ ಮುಗಿದಿದ್ದು, ಇಬ್ಬರ ಕಾಂಬಿನೇಷನ್‌ ದೃಶ್ಯಗಳ ಚಿತ್ರೀರಣವೂ ನಡೆದಿದೆ. ರೆಬಾ ಮೋನಿಕಾ ಜಾನ್‌ ಅವರಿಗೆ ಕನ್ನಡದ ಮೊದಲ ಚಿತ್ರ ಇದಾಗಿದ್ದರೂ, ಮಲಯಾಳಂನ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದರೊಂದಿಗೆ ತೆಲುಗು ನಟ ನಾನಿ ಜೊತೆಯಲ್ಲೂ ರೆಬೋ ಮೋನಿಕಾ ಜಾನ್‌ ನಟಿಸುತ್ತಿದ್ದಾರೆ. ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲಿ ಇನ್ನೊಂದು ಹಂತದ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ, ಈ ಚಿತ್ರಕ್ಕೆ ಧನುಷ್‌ ಅವರ ಬ್ಯಾನರ್‌ ಜೊತೆ ನಿರ್ದೇಶಕ ಜೇಕಬ್‌ ವರ್ಗೀಸ್‌ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಈ ಚಿತ್ರವನ್ನು ಇಸ್ಲಾಂವುದ್ದೀನ್‌ ನಿರ್ದೇಶಿಸುತ್ತಿದ್ದಾರೆ. ಯುಕೆಯಲ್ಲಿ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ ಕೋರ್ಸ್‌ ಮಾಡಿರುವ ಇಸ್ಲಾಂವುದ್ದೀನ್‌ ಅವರಿಗೆ ಕನ್ನಡದಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಹೊಸ ಬಗೆಯ ಕಥೆಯಾಗಿದ್ದು, ಪಕ್ಕಾ ಕಾಮಿಡಿ ಡ್ರಾಮಾ ಇರುವ ಚಿತ್ರ. ಇದರ ಜೊತೆಗೆ ಲವ್‌, ಎಮೋಷನ್ಸ್‌ ಎಲ್ಲವೂ ಒಳಗೊಂಡಿದೆ. ಧನುಷ್‌ ಅವರಿಗೆ ಇಸ್ಲಾಂವುದ್ದೀನ್‌ ಹೇಳಿದ ಕಥೆ ಇಷ್ಟವಾಗಿದ್ದರಿಂದ ಅವರು ಕನ್ನಡದಲ್ಲಿ ಈ ಚಿತ್ರ ಮಾಡುವ ಮನಸ್ಸು ಮಾಡಿದ್ದಾರೆ.

ಇಸ್ಲಾಂವುದ್ದೀನ್‌ ಕೂಡ ಇಲ್ಲಿನವರೇ ಆಗಿರುವುದರಿಂದ, ಹೊಸ ಬಗೆಯ ಚಿತ್ರ ಕಟ್ಟಿಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ರಿಷಿ ಸದ್ಯಕ್ಕೆ ಖುಷಿಯಲ್ಲಿದ್ದಾರೆ. “ಆಪರೇಷನ್‌ ಅಲಮೇಲಮ್ಮ’ ಮಾಡಿದ್ದೇ ತಡ, ಪುನೀತ್‌ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅದೃಷ್ಟ ಅವರದ್ದಾಗಿದೆ. ಆ ಚಿತ್ರ ಡಿಸೆಂಬರ್‌ ಅಂತ್ಯದಲ್ಲಿ “ಕವಲು ದಾರಿ’ ತೆರೆಗೆ ಬರುವ ಸಾಧ್ಯತೆ ಇದೆ. ಈ ನಡುವೆ ರಿಷಿ ಅವರು ಎರಡು ಕಥೆಗಳನ್ನು ಅಂತಿಮಗೊಳಿಸಿದ್ದಾರೆ. ಇಷ್ಟರಲ್ಲೇ ಆ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಲಿದೆ.

Comments are closed.