ರಾಷ್ಟ್ರೀಯ

ಸೊಸಗೆ ಕಿಡ್ನಿ ದಾನ ಮಾಡಿದ ಅತ್ತೆ!: ದಾನಕ್ಕೆ ಹೆತ್ತ ತಾಯಿ, ತಂದೆ, ಸಹೋದರರಿಂದ ನಿರಾಕರಣೆ

Pinterest LinkedIn Tumblr


ಜೈಸ್ಮಲೇರ್: ಅತ್ತೆ-ಸೊಸೆಯಂದಿರೆಂದರೆ ಸಾಮಾನ್ಯವಾಗಿ ಹಾವು-ಮುಂಗುಸಿ ಥರ ಇರುತ್ತಾರೆ. ಆದರೆ ರಾಜಸ್ಥಾನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ನಡೆದಿದೆ. ಕಿಡ್ನಿ ವೈಫಲ್ಯಕ್ಕೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗಳಿಗೆ ಕಿಡ್ನಿ ದಾನ ಮಾಡಲು ಹೆತ್ತ ತಾಯಿ, ತಂದೆ, ಸಹೋದರರೇ ನಿರಾಕರಿಸಿದರು. ಆದರೆ ಆಕೆಯ ಅತ್ತೆ (ಪತಿಯ ತಾಯಿ) ತನ್ನ ಕಿಡ್ನಿ ದಾನ ಮಾಡುವ ಮೂಲಕ ಸೊಸೆಯನ್ನು ಉಳಿಸಿಕೊಂಡಿದ್ದಾಳೆ.

ಸೋನಿಕಾ ದೇವಿ (32) ಮೂತ್ರಪಿಂಡಗಳ ವೈಫಲ್ಯಕ್ಕೆ ಒಳಗಾಗಿದ್ದು, ಆಕೆಯನ್ನು ಉಳಿಸಿಕೊಳ್ಳಬೇಕೆಂದರೆ ಡಯಾಲಿಸಿಸ್ ಮಾಡುತ್ತ ಇರಬೇಕು. ಇಲ್ಲವೇ ಕಿಡ್ನಿ ಕಸಿ ಮಾಡಬೇಕು ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಆದರೆ ನಿರಂತರವಾಗಿ ಡಯಾಲಿಸಿಸ್ ಕಷ್ಟಕರವಾಗಿದ್ದರಿಂದ ಕಿಡ್ನಿ ಕಸಿ ಮಾಡುವುದೇ ಸೂಕ್ತ ಎಂದು ಸಲಹೆ ನೀಡಿದ್ದರು. ಸೋನಿಕಾಗೆ ಕಿಡ್ನಿ ದಾನ ಮಾಡುವಿರಾ ಎಂದು ಮೊದಲು ಆಕೆಯ ತಾಯಿಯಲ್ಲಿ ಕೇಳಲಾಗಿತ್ತು. ಆದರೆ ಆಕೆ ಸಾರಾಸಗಟಾಗಿ ನಿರಾಕರಿಸಿದ್ದಳು. ಆಕೆಯ ತಂದೆ, ಸಹೋದರ ಕೂಡ ಕಿಡ್ನಿ ನೀಡಲು ಮುಂದಾಗಲಿಲ್ಲ. ಆದರೆ ಅತ್ತೆ ಗಾನಿ ದೇವಿ (60) ಸೋನಿಕಾ ನನಗೆ ಮಗಳಿದ್ದಂತೆ, ಆಕೆಗೆ ನಾನು ಕಿಡ್ನಿ ನೀಡುತ್ತೇನೆ ಎಂದು ಹೇಳುವುದರ ಮೂಲಕ ಅತ್ತೆ-ಸೊಸೆ ಸಂಬಂಧ ಹೀಗೂ ಇರುತ್ತದೆ ಎಂದು ತೋರಿಸಿಕೊಟ್ಟಳು.

ಸೆಪ್ಟೆಂಬರ್ 13ಕ್ಕೆ ಸೋನಿಕಾಗೆ ಕಿಡ್ನಿ ಕಸಿ ಮಾಡಲಾಗಿದ್ದು, ಮತ್ತೀಗ ಆಕೆ ಆರೋಗ್ಯವಾಗಿದ್ದಾಳೆ.

ತನಗೆ ಮರುಜೀವ ಕೊಟ್ಟ ಅತ್ತೆಗೆ ನಾನು ಸದಾ ಕೃತಜ್ಞಳೆನ್ನುತ್ತಾರೆ ಎರಡು ಹೆಣ್ಣು ಮಕ್ಕಳ ತಾಯಿಯಾಗಿರುವ ಸೋನಿಕಾ.

Comments are closed.