ರಾಷ್ಟ್ರೀಯ

ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆದ 12 ವರ್ಷ ಸಾರ್ವಜನಿಕ ಶೌಚಾಲಯದಲ್ಲಿ ವಾಸ ಮಾಡಿದ್ದ ಯುವತಿ!

Pinterest LinkedIn Tumblr


ಭೋಪಾಲ್: ಬರೋಬ್ಬರಿ 12 ವರ್ಷ ಸುಲಭ ಶೌಚಾಲಯದಲ್ಲಿ ಜೀವನ ನಡೆಸಿದ್ದ ಯುವತಿಯೋರ್ವಳು ಈಗ ಮಧ್ಯಪ್ರದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.

ಹೌದು, ಆಕೆಯ ಹೆಸರು ಜೂಹಿ ಝಾ (20). ಕಳೆದ ಮೂರು ವರ್ಷಗಳ ಹಿಂದೆ ಜೂಹಿ ಅಂತರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾಗ ಸಹ ವಾಸ ಮಾಡಲು ಮನೆ ಸಹ ಇಲ್ಲದ ಅವರ ಬಡ ಪರಿವಾರ ಸಾರ್ವಜನಿಕ ಶೌಚಾಲಯದ 10×10 ಕೋಣೆಯಲ್ಲಿ ಆಶ್ರಯ ಪಡೆದುಕೊಂಡಿತ್ತು. ಈ ಬಡತನ ಅವಳ ಸಾಧನೆಗೆ ಅಡ್ಡಿಯಾಗಲಿಲ್ಲ. ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿ ಬೆಳೆದ ಆಕೆಗೆ ಗುರುವಾರ ಮಧ್ಯಪ್ರದೇಶ ಸರಕಾರ ವಿಕ್ರಮ್ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜ್ಯದ ಕ್ರೀಡಾ ಸಚಿವ ಯಶೋಧರ ರಾಜೇ ಸಿಂಧಿಯಾ ಅವರು ಗುರುವಾರ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಮತ್ತು ಜೂಹಿ ಝಾಗೆ 2017-2018ರ ವಿಕ್ರಮ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ವಿಕ್ರಮ್ ಪ್ರಶಸ್ತಿ ದೊರೆತಿದ್ದು ಜೂಹಿ ಪಾಲಿಗೆ ಬಹಳ ಮಹತ್ವದ್ದೆನಿಸಿದೆ. ಮೂಲತಃ ಇಂದೋರ್ ನಿವಾಸಿಯಾಗಿರುವ ಜೂಹಿ, ”ನನ್ನ ತಂದೆಗೆ ಯಾವುದೇ ಕೆಲಸವಿಲ್ಲ. ಮಧ್ಯಪ್ರದೇಶ ಸರಕಾರ ವಿಕ್ರಮ್ ಪ್ರಶಸ್ತಿ ವಿಜೇತರಿಗೆ ಸರಕಾರಿ ನೌಕರಿಯನ್ನು ನೀಡುತ್ತದೆ. ಅದರಂತೆ ನನಗೂ ಸಹ ಸರಕಾರಿ ನೌಕರಿ ಸಿಗುತ್ತದೆ”, ಎಂಬ ಅಭಿಲಾಷೆ ತನ್ನ ಪರಿವಾರದ್ದು , ಎನ್ನುತ್ತಾರೆ.

12 ವರ್ಷ ಶೌಚಾಲಯದಲ್ಲಿ ವಾಸ

ಜೂಹಿ ತಂದೆ ಇದೋರ್ ನಗರ ಪಾಲಿಕೆಯ ಕಚೇರಿ ಬಳಿ ಸಾರ್ವಜನಿಕ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ವಾಸ ಮಾಡಲು ಅವರಿಗೊಂದು ಕೊಠಡಿಯನ್ನು ನೀಡಲಾಗಿತ್ತು. ಜೂಹಿ, ಆಕೆಯ ಇಬ್ಬರು ಸಹೋದರರು ಮತ್ತು ತಂದೆ-ತಾಯಿ ಆ ಕೋಣೆಯಲ್ಲಿಯೇ ವಾಸಿಸುತ್ತಿದ್ದರು. ಬಳಿಕ ಅವರ ನೌಕರಿಯೂ ಕೈ ತಪ್ಪಿತು. ಹೀಗಾಗಿ ಬಾಣಗಂಗಾದಲ್ಲಿ ಪುಟ್ಟ ಗುಡಿಸಲಿನಲ್ಲಿ ವಾಸ ಮಾಡಹತ್ತಿದ್ದರು.

”ನಾಲ್ಕನೇ ತರಗತಿಯಲ್ಲಿದ್ದಾಗ ಶಾಲೆಯ ಖೋ-ಖೋ ತಂಡಕ್ಕೆ ನನ್ನನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಉಪ ಜೂನಿಯರ್ ತಂಡದಲ್ಲಿ ಆಡಿದಾಗ ನಾನು 6ನೇ ತರಗತಿಯಲ್ಲಿದ್ದೆ. ಅಂದಿನಿಂದ ನಾನು ಹಿಂತಿರುಗಿ ನೋಡಲೇ ಇಲ್ಲ. 40 ಬಾರಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೆ”,. ಎನ್ನುತ್ತಾರೆ ಜೂಹಿ.

ಇಂದು ರಾಷ್ಟ್ರೀಯ ತಂಡದ ಭಾಗವಾಗಿರುವ ಜೂಹಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ದೇಶವನ್ನು ಪ್ರತಿನಿಧಿಸಿದ್ದು ದೇಶಕ್ಕೆ ಚಿನ್ನದ ಪದಕ ಗೆದ್ದು ತರುವಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ.

ತನ್ನ ಮಗಳ ಸಾಧನೆ ಬಗ್ಗೆ 49ರ ವಯಸ್ಸಿನ ಬಡ ತಂದೆ ಸುಬೋಧ್ ಹೆಮ್ಮೆ ವ್ಯಕ್ತಪಡಿಸುತ್ತಿದ್ದು ಆಕೆಯಿಂದಾಗಿಯಾದರೂ ತಮ್ಮ ಬಡತನಕ್ಕೆ ಮುಕ್ತಿ ಸಿಗಬಹುದೆಂಬ ಭರವಸೆಯಲ್ಲಿದ್ದಾರೆ.

Comments are closed.