ರಾಷ್ಟ್ರೀಯ

ಬಿಎಸ್‌ಪಿ ನಂತರ ಕಾಂಗ್ರೆಸ್ ಗೆ ಕೈಕೊಟ್ಟ ಎಸ್‌ಪಿ

Pinterest LinkedIn Tumblr


ಲಖನೌ: ಕಾಂಗ್ರೆಸ್‌ಗೀಗ ಸಂಕಷ್ಟದ ಕಾಲ ಶುರುವಾದಂತಿದೆ. ‘ಕೈ’ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಹೇಳಿದ ಬಳಿಕ ಈಗ ಸಮಾಜವಾದಿ ಪಕ್ಷವೂ ಅದೇ ಹಾದಿ ತುಳಿದಿದೆ. ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ನಿರ್ಧಾರಮಾಡಲು ಕಾಂಗ್ರೆಸ್ಗಾಗಿ ಕಾಯುವುದಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್ ಹೇಳಿದ್ದಾರೆ. ಅಲ್ಲದೆ, ಒಟ್ಟಾಗಿ ಚುನಾವನೆ ಎದುರಿಸಲು ಬಿಎಸ್‌ಪಿಯೊಂದಿಗೆ ಮಾತುಕತೆ ನಡೆಸುವುದಾಗಿಯೂ ಅಖಿಲೇಶ್‌ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ, ಕಾಂಗ್ರೆಸ್‌ ಜತೆಗೆ ಮಧ್ಯಪ್ರದೇಶದಲ್ಲಿ ಮೈತ್ರಿ ತಳ್ಳಿಹಾಕಿದ್ದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಲ್ಲದೆ, ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶಗಳ ಬಗ್ಗೆಯೂ ಕೈ ಪಕ್ಷವನ್ನು ಪ್ರಶ್ನಿಸಿದ್ದರು. ಇನ್ನು, 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎಸ್‌ಪಿ ಹಾಗೂ ಬಿಎಸ್‌ಪಿ ಮಾತುಕತೆ ನಡೆಸುತ್ತಿವೆ.

ಸಮಾಜವಾದಿ ಪಕ್ಷದ ಮುಖ್ಯ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್‌ ಯಾದವ್, ”ಕಾಂಗ್ರೆಸ್ ಈಗಾಗ್ಲೇ ಸಾಕಷ್ಟು ಸಮಯವನ್ನು ಹಾಳು ಮಾಡಿದೆ. ಇನ್ನು ಎಷ್ಟು ಸಮಯ ಹಾಳು ಮಾಡಬೇಕು. ಈಗ ಚುನಾವಣೆ ದಿನಾಂಕ ಸಹ ಘೋಷಣೆಯಾಗಲಿರುವುದರಿಂದ, ನಾವಿನ್ನು ಕಾಯುವುದಿಲ್ಲ” ಎಂದು ಕೈ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಜತೆಗೆ, ”ಎಸ್‌ಪಿ ಈಗಾಗ್ಲೇ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ದೊಂಡವಾನನ್ ಗಣತಂತ್ರ ಪಕ್ಷ ( ಡಿಜಿಪಿ) ಜತೆ ಮಾತುಕತೆ ನಡೆಸುತ್ತಿದ್ದೇವೆ. ಜತೆಗೆ, ಬಿಎಸ್‌ಪಿ ಜತೆಗೂ ಈಗ ಮಾತುಕತೆ ನಡೆಸಲಿದ್ದೇವೆ” ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

Comments are closed.