ಕುಂದಾಪುರ: ಮಧ್ಯಾಹ್ನದಿಂದ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂಬಂದಿಯಿಂದ ಬಂದ ಈಚರ್ ಲಾರಿ ಡಿಕ್ಕಿ ಹೊಡೆದಿದ್ದು ಲಾರಿಯ ಚಾಲಕ ಹಾಗೂ ನಿರ್ವಾಹಕ ಗಂಭೀರ ಗಾಯಗೊಂಡ ಘಟನೆ ತೆಕ್ಕಟ್ಟೆ ಸಮೀಪದ ಕನ್ನುಕೆರೆ ರಾ.ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಡಿಕ್ಕಿ ಹೊಡೆದ ಲಾರಿ ಮಹಾರಾಷ್ಟ್ರ ನೋಂದಣಿಯಾಗಿದ್ದು ಲಾರಿಯಲ್ಲಿದ್ದ ಗಾಯಾಳುಗಳಿಬ್ಬರು ಮಹಾರಾಷ್ಟ್ರ ಮೂಲದವರು ಎನ್ನಲಾಗಿದೆ. ಇಬ್ಬರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೆಕ್ಕಟ್ಟೆ ಸಮೀಪದ ಕನ್ನುಕೆರೆಯ ಬಳಿ ಹೆದ್ದಾರಿಯಲ್ಲಿ ಗೂಡ್ಸ್ ಲಾರಿಯೊಂದು ಟಯರ್ ಸ್ಪೋಟಗೊಂಡು ಕೆಟ್ಟು ನಿಂತಿದ್ದು ಈ ಲಾರಿಯ ಹಿಂದೆ ಮುಂದೆ ಯಾವುದೇ ಎಚ್ಚರಿಕೆ ಫಲಕ ಅಥವಾ ಬ್ಯಾರಿಕೇಡ್ ಅಳವಡಿಕೆ ಮಾಡಿರಲಿಲ್ಲ. ಸಂಜೆ ಸುಮಾರಿಗೆ ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಈಚರ್ ಲಾರಿಯು ಇಲ್ಲಿನ ಗೊಂದಲದಿಂದ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಕೆಟ್ಟು ನಿಂತ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಚಾಲಕ ಹಾಗೂ ಇನ್ನೋರ್ವನ ಕಾಲಿಗೆ ಗಂಭೀರ ಗಾಯವಾಗಿದ್ದು ಈಚರ್ ಲಾರಿ ಮುಂಭಾಗ ಜಖಂಗೊಂಡಿದೆ. ಗಾಯಾಳುಗಳನ್ನು ತೆಕ್ಕಟ್ಟೆ ಫ್ರೆಂಡ್ಸ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.
ಸಾರ್ವಜನಿಕರ ಅಸಮಾಧಾನ!
ಮಧ್ಯಾಹ್ನದಿಂದ ಕೆಟ್ಟು ನಿಂತ ಗೂಡ್ಸ್ ಲಾರಿ ಹೆದ್ದಾರಿಯ ಮಧ್ಯೆಯೇ ಇದ್ದರೂ ಸಂಬಂದಪಟ್ಟ ಯಾರೋಬ್ಬರೂ ಕೂಡ ಈ ಬಗ್ಗೆ ಕ್ಯಾರೇ ಅನ್ನಲಿಲ್ಲ. ಪೊಲೀಸ್ ವ್ಯವಸ್ಥೆಯಾಗಿರುವ ಹೈವೇ ಪ್ಯಾಟ್ರೋಲ್ ಗಸ್ತು ವಾಹನದವರು ಬ್ಯಾರಿಕೇಡ್ ಅಳವಡಿಸಲೂ ಸೂಚನೆ ನೀಡಿರಲಿಲ್ಲ. ಹಲವು ಗಂಟೆಗಳು ಹೆದ್ದಾರಿಯಲ್ಲೇ ಕೆಟ್ಟು ನಿಂತ ವಾಹನವಿದ್ದು ಯಾವುದೇ ಅವಘಡ ನಡೆಯದಂತೆ ಹೆದ್ದಾರಿ ಚತುಷ್ಪತ ಗುತ್ತಿಗೆ ಕಂಪೆನಿಯಾದ ನವಯುಗವೂ ಈ ಬಗ್ಗೆ ಯಾವುದೇ ಮುಂಜಾಗ್ರತ ಕ್ರಮ ವಹಿಸಿರಲಿಲ್ಲ. ಅಪಘಾತ ನಡೆದ ಬಳಿಕ ಕೋಟ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.
ಘಟನಾ ಸ್ಥಳಕ್ಕೆ ಕೋಟ ಪಿಎಸ್ಐ ನರಸಿಂಹ ಶೆಟ್ಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.
Comments are closed.