
ಮಂಗಳೂರು, ಸೆಪ್ಟಂಬರ್.10: ಗ್ಯಾಸ್, ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ವಿರುದ್ಧ ದೇಶದಾದ್ಯಂತ ಇಂದು ಕಾಂಗ್ರೆಸ್ ಪಕ್ಷ ನೀಡಿರುವ ಭಾರತ ಬಂದ್ ವೇಳೆ ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಸುಮಾರು 60 ಮಂದಿಯನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ಕಂಕನಾಡಿಯಲ್ಲಿ ಸೇರಿದ್ದರು. ಈ ಸಂದರ್ಭ ಕದ್ರಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 49 ಮಂದಿಯನ್ನು ಬಂಧಿಸಿ, ಮಧ್ಯಾಹ್ನ ಬಳಿಕ ಬಿಡುಗಡೆ ಮಾಡಿದ್ದಾರೆ. ಉಳಿದ 11 ಮಂದಿ ನಾನಾ ಠಾಣೆಗಳಲ್ಲಿ ಬಂಧಿಸಲಾಗಿದೆ.

ಮಾಜಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ :
ಈ ನಡುವೆ ಮಾಜಿ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜ್ಯೋತಿ ಸರ್ಕಲ್ (ಡಾ.ಬಿ.ಆರ್.ಅಂಬೇಡ್ಕರ್ ವೃತ್ತ) ಬಳಿ ರಸ್ತೆ ತಡೆ ನಡೆಸಿ ಇಂಧನ ಬೆಲೆಯೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಂಕನಾಡಿಯಲ್ಲಿ ಗಮನ ಸೆಳೆದ ಎತ್ತಿನಗಾಡಿ:
ಕಂಕನಾಡಿಯಲ್ಲಿ ಇಂದು ಬೆಳಗ್ಗೆ ಎತ್ತಿನಗಾಡಿಯೊಂದು ಕೇಂದ್ರ ಸರಕಾರದ ವಿರುದ್ಧದ ಘೋಷಣೆಗಳುಳ್ಳ ಫಲಕಗಳನ್ನು ತೂಗು ಹಾಕಿ ಕೊಂಡು ಸಂಚರಿಸುವ ಮೂಲಕ ಗಮನಸೆಳೆಯಿತು.
ಬಂಟ್ವಾಳ ಶಾಸಕರ ಕಾರಿನ ಮೇಲೆ ಕಲ್ಲೆಸೆತ:
ಬಂಟ್ವಾಳ ಶಾಸಕ ಬಿಜೆಪಿಯ ರಾಜೇಶ್ ನಾಯ್ಕ್ ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಬೋಳಂಗಡಿಯಲ್ಲಿ ನಡೆದಿದೆ.
ಶಾಸಕರು ಬಂಟ್ವಾಳದಿಂದ ಕಲ್ಲಡ್ಕಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಶಾಸಕರಿದ್ದ ಕಾರು ಬೋಳಂಗಡಿ ತಲುಪುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರೆನ್ನಲಾಗಿದೆ. ಇದರಿಂದ ಕಾರಿನ ಎಡಭಾಗಕ್ಕೆ ಸ್ವಲ್ಪ ಹಾನಿಯಾಗಿದೆ.
ಘಟನೆಯ ಬಗ್ಗೆ ಶಾಸಕ ರಾಜೇಶ್ ನಾಯ್ಕೆ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಕಲ್ಲೆಸೆತ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಗರ ಠಾಣೆಯೆದುರು ಜಮಾಯಿಸಿ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ :
ಬಂದ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಂದೋಬಸ್ತ್ ಕರ್ತವ್ಯಕ್ಕಾಗಿ ಮಂಗಳೂರು ನಗರ ಪೊಲೀಸ್ ವತಿಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
1 ಡಿಸಿಪಿ, 4 ಎಸಿಪಿ, 25 ಪೊಲೀಸ್ ಇನ್ಸ್ಪೆಕ್ಟರ್, 30 ಪಿಎಸ್ಸೈ ಮತ್ತು 1,000 ಸಿವಿಲ್ ಸಿಬ್ಬಂದಿ, 150 ಹೋಮ್ ಗಾರ್ಡ್ಸ್, 4 ಕೆಎಸ್ಆರ್ಪಿ ತುಕುಡಿ, 10 ಸಿಎಆರ್ ತುಕುಡಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಈ ಸಂದರ್ಭ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಸಮಾಜ ಘಾತುಕ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಡಲಾಗಿತ್ತು.
Comments are closed.