
ರಾಮನಗರ: ದೂರವಾಣಿ ಕದ್ದಾಲಿಕೆ ಮಾಡುತ್ತಿರುವ ಅಂಶ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು ಆರೋಪ ನಿರಾಧಾರ ಎಂದಿದ್ದಾರೆ.
ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಾನು ಯಾರ ಫೋನನ್ನೂ ಕದ್ದಾಲಿಕೆ ಮಾಡಿಲ್ಲ. ನಾನು ಅಂತಹ ಸಂಸ್ಕೃತಿಯಿಂದ ಬಂದವನಲ್ಲ ಎಂದು ಯಡಿಯೂರಪ್ಪ ಅವರ ವಿರುದ್ದ ಕಿಡಿ ಕಾರಿದರು.
ಕೇಂದ್ರದಲ್ಲಿ ಅವರದ್ದೇ ಸರಕಾರ ಇದೆ. ಬೇಕಾದರೆ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.
ಪರಿಣಾಮ ನೆಟ್ಟಗಿರುವುದಿಲ್ಲ
‘ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸೇರಿ ನನ್ನ ಫೋನನ್ನು ಕದ್ದಾಲಿಕೆ ಮಾಡಲಾಗಿದೆ’ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ‘ಕದ್ದಾಲಿಕೆಗೆ ಕಡಿವಾಣ ಹಾಕದಿದ್ದಲ್ಲಿ ಆಗುವ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ನನ್ನ ಫೋನ್ ಕದ್ದಾಲಿಕೆ ಆಗಿಲ್ಲ
ನನ್ನ ಫೋನ್ ಕದ್ದಾಲಿಕೆ ಆಗಿಲ್ಲ.ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಫೋನ್ ಕದ್ದಾಲಿಸುವುದಿಲ್ಲ
ಉಪಮುಖ್ಯಮಂತ್ರಿ , ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ‘ನಾವು ಯಡಿಯೂರಪ್ಪ ಅವರದ್ದಾಗಲಿ ,ಬೇರೆಯವರದ್ದಾಗಲಿ ಫೋನ್ ಕದ್ದಾಲಿಸಿಲ್ಲ. ಅನಧಿಕೃತ ಚಟುವಟಿಕೆ ಮಾಡುವವರ ಫೋನನ್ನು ಮಾತ್ರ ಪೊಲೀಸ್ ಇಲಾಖೆ ಟ್ಯಾಪಿಂಗ್ ಮಾಡುತ್ತದೆ’ ಎಂದರು.
Comments are closed.