
ಬೆಂಗಳೂರು: ಚಿತ್ರರಂಗದಲ್ಲಿ ಖ್ಯಾತಿ ಗಳಿಸಬೇಕಾದರೆ ಮಗುವನ್ನು ಬಲಿ ಕೊಡಬೇಕು, ದೋಷ ನಿವಾರಣೆಗೆ ಪೂಜೆ ಮಾಡಿಸಬೇಕು ಎಂದು ನಂಬಿಸಿ, ಸಹನಿರ್ಮಾಪಕನೊಬ್ಬ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ ಎಂದು ನಟಿಯೊಬ್ಬರು ದೂರು ದಾಖಲಿದ್ದಾರೆ.
ನಟಿ ಚೇತನಾ ಎಂಬುವವರೇ ಸಹ ನಿರ್ಮಾಪಕ ನಾಗೇಶ್ ವಿರುದ್ಧ ದೂರು ನೀಡಿದವರು.
ಕೆಲ ವರ್ಷಗಳ ಹಿಂದೆ ಸೆಟ್ಟೇರಿದ್ದ ವಿ.ರವಿಚಂದ್ರನ್ ಅಭಿನಯ ಹಾಗೂ ನಿರ್ದೇಶನದ ಮಂಜಿನ ಹನಿ ಚಿತ್ರದಲ್ಲಿ ಚೇತನಾ ನಾಯಕನ ತಂಗಿ ಪಾತ್ರ ಮಾಡುತ್ತಿದ್ದರು. ಇದೇ ಚಿತ್ರಕ್ಕೆ ನಾಗೇಶ್ ಸಹನಿರ್ಮಾಪಕರಾಗಿದ್ದರು.
2013ರಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಆರಂಭದಲ್ಲಿ ಸಂದೇಶ್ ನಾಗರಾಜ್ ಈ ಸಿನಿಮಾಗೆ ಹಣ ಹೂಡಿದ್ದರು. ಆನಂತರ ಅವರು ಚಿತ್ರದಿಂದ ಹೊರಬಂದಿದ್ದರು. ಆರ್ಥಿಕ ಸಮಸ್ಯೆ ಕಾರಣದಿಂದ ಸಿನಿಮಾ ನಿಲ್ಲಿಸಲಾಗಿತ್ತು. 2015ರಲ್ಲಿ ಸ್ವತಃ ರವಿಚಂದ್ರನ್ ಅವರೇ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿ, ಚಿತ್ರೀಕರಣ ಆರಂಭಿಸಿದ್ದರು. ಈ ವೇಳೆ ಹೊಸಕೋಟೆ ಮೂಲದ ನಾಗೇಶ್ ಎಂಬಾತ ಸಿನಿಮಾಗೆ ಸಹ ನಿರ್ಮಾಪಕ ಆಗುತ್ತಾರೆ. ನಟಿ ಚೇತನಾಗೆ ಮಂಜಿನಹನಿ ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ನಾಗೇಶ್ ಅವಕಾಶ ಕಲ್ಪಿಸಿಕೊಡುತ್ತಾರೆ. ಮತ್ತೆ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಲ್ಲುತ್ತದೆ. ಈ ವೇಳೆ ಚೇತನಾ ಅವರೊಂದಿಗೆ ನಾಗೇಶ್ ಹೆಚ್ಚು ಪರಿಚಿತನಾಗಿ, ವಾಟ್ಸಾಪ್ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ.
“ನೀನು ಸಿನಿಮಾರಂಗದಲ್ಲಿ ದೊಡ್ಡಮಟ್ಟಕ್ಕೆ ಬೆಳೆಯಬೇಕು, ಒಳ್ಳೆಯ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗುವಂತೆ ನಾಗೇಶ್ ತಿಳಿಸುತ್ತಾನೆ. ಅದರಂತೆ ನಾನು ಮೊಬೈಲ್ ನಲ್ಲಿ ಗೌರಿ ಎಂಬ ಮಹಿಳೆಯೊಂದಿಗೆ ಮಾತಾಡಿದೆ. ಆಗ ಆಕೆ. ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು, ನಿನಗೆ ದೋಷವಿದೆ, ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು. ನಿನ್ನ ಹೆಸರಲ್ಲಿ ನಾವು ಪೂಜೆ ಮಾಡ್ತಿವಿ ನಿನಗೆ ಒಳ್ಳೆ ಹೆಸರು ಬರುತ್ತೆ, ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂದು ನನ್ನನ್ನು ನಂಬಿಸಿದರು. ಹೀಗೆ ಕಳೆದ ಮೂರು ವರ್ಷಗಳಿಂದ ಸುಮಾರು ಎಂಟೂವರೆ ಲಕ್ಷ ರೂ.ಹಣ ಪಡೆದು ಮೋಸ ಮಾಡಿದ್ದಾರೆ. ಆಗಸ್ಟ್ 1 ರಂದು ವೀಣಾ ಎಂಬ ಮಹಿಳೆಯ ಅಕೌಂಟ್ ನಂಬರ್ಗೆ ನಾಗೇಶ್ ಮತ್ತೆ 50 ಸಾವಿರ ಜಮಾ ಮಾಡಿಸಿಕೊಂಡಿದ್ದಾರೆ. ಇದೀಗ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ, ತಲೆಮರೆಸಿಕೊಂಡಿದ್ದಾರೆ,” ಎಂದು ನಟಿ ಚೇತನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಸಹ ನಿರ್ಮಾಪಕ ನಾಗೇಶ್ ಹಾಗೂ ಗೌರಿ ಎಂಬಾಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Comments are closed.