
ನವದೆಹಲಿ: ಭಾರತೀಯ ರಾಜಕಾರಣದ ಅಜಾತಶತ್ರು, ಶ್ರೇಷ್ಠ ವಾಗ್ಮಿ, ದಾರ್ಶನಿಕ ಎಂದೆಲ್ಲ ಕರೆಸಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.05 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಏಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ.
93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು. ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಒಂಬತ್ತು ವಾರಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿಗೆ ಜನಿಸಿದ್ದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ ಜೀ ಅವರು 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ನೇಹ ಸಂಪಾದಿಸಿದರು.
ಅಟಲ್ ಜೀ ಅವರು ವೀರ ಅರ್ಜುನ ಹಾಗೂ ಪಾಂಚಜನ್ಯ ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದ್ದರು.
ಅಟಲ್ ಜೀ ಅವರು ಪ್ರಧಾನಿಯಾಗಿದ್ದಾಗ ಫೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ತೋರಿಸಿದ್ದರು. ಇನ್ನು ತಮ್ಮ ಅವಧಿಯಲ್ಲೇ ಭಾರತೀಯ ಸೇನೆಗೆ ಹೆಚ್ಚಿನ ಅಧಿಕಾರವನ್ನು ನೀಡಿ ಗಡಿ ನುಸುಳುಕೋರರನ್ನು ಸದೆಬಡಿಸಿದ್ದರು. 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದರು
Comments are closed.