ಕುಂದಾಪುರ: ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿಯಾಗಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾದ ಬಗ್ಗೆ ನವಯುಗ ಗುತ್ತಿಗೆ ಕಂಪೆನಿ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯವರು ನಾಗರಿಕರನ್ನು ಒಗ್ಗೂಡಿಸಿಕೊಂಡು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಗುತ್ತಿಗೆ ಕಂಪೆನಿ ಏಕಾಏಕಿಯಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಹಣಕ್ಕಾಗಿ ಕಂಪೆನಿ ಕಳ್ಳದಾರಿ ಹಿಡಿದಿರುವುದು ಖಂಡನೀಯ. ಇನ್ನೂ ಕೆಲವೆಡೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ರಸ್ತೆ ಪೂರ್ಣಗೊಳ್ಳದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದು ಸರಿಯಲ್ಲ. ಸ್ಥಳೀಯರೊಂದಿಗೆ ಡಿಸಿ ಸಭೆ ನಡೆಸಿ ಎಲ್ಲರ ಒಮ್ಮತ ಪಡೆದು ಮುಂದಿನ ಕ್ರಮಕೈಗೊಳ್ಳಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ವೇಳೆ ಗುತ್ತಿಗೆ ಕಂಪೆನಿ ನವಯುಗದ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿದರು ಮಾತ್ರವಲ್ಲದೇ ಜನಪ್ರತಿನಿಧಿಗಳ ವಿರುದ್ಧವೂ ಗರಂ ಆದರು.

ಸ್ಥಳಕ್ಕಾಗಮಿಸಿದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ.ಭೂಬಾಲನ್, ಶುಕ್ರವಾರ ಸಂಜೆ ಡಿಸಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸಮಿತಿಯ ಮುಖಂಡರು ಭಾಗವಹಿಸಿ ಚರ್ಚಿಸಿ. ಅಲ್ಲಿಯವರೆಗೂ ಟೋಲ್ ಸಂಗ್ರಹಣೆ ನಡೆಯಲಿ ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತರು ಈಗ ಯಥಾಸ್ಥಿತಿ ಮುಂದುವರೆಯಲಿ. ಡಿಸಿ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿ. ಅಲ್ಲಿಯ ತನಕ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಬಾರದು ಎಂದು ಪಟ್ಟು ಹಿಡಿದರು.
ಕೊನೆಗೂ ಪ್ರತಿಭಟನಾಕಾರರು ಎಸಿ ಮಾತಿಗೆ ಒಪ್ಪದಿದ್ದಾಗ ಡಿಸಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಚರ್ಚೆ ನಡೆಸಿದ ಎಸಿ ಭೂಬಾಲನ್ ನಾಳೆ ನಡೆಯುವ ಡಿಸಿ ಸಭೆಯವರೆಗೂ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಬಾರದು ಎಂದು ಗುತ್ತಿಗೆ ಕಂಪೆನಿಗೆ ಆದೇಶ ನೀಡಿದರು. ಎಸಿ ನೀಡಿದ ಭರವಸೆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಇದೇ ವೇಳೆ ಸ್ಥಳಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿದ್ದು ಸ್ಥಳೀಯರ ಸಮಸ್ಯೆ ಆಲಿಸಿ ಅಧಿಕಾರಿಗಳ ಜೊತೆ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಆಲ್ವಿನ್ ಅಂದ್ರಾದೆ, ತಾ.ಪಂ ಸದಸ್ಯೆ ಜ್ಯೋತಿ, ಐರೋಡಿ ಗ್ರಾ.ಪಂ ಅಧ್ಯಕ್ಷೆ ಮೋಸೆಸ್ ರೋಡ್ರಿಗಸ್, ಪಾಂಡೇಶ್ವರ ಗ್ರಾ,ಪಂ ಅಧ್ಯಕ್ಷ ಗೋವಿಂದ ಪೂಜಾರಿ, ಮಹೇಶ್ ಕುಮಾರ್ ಕುಂದಾಪುರ, ಪ್ರಕಾಶ ಶೆಟ್ಟಿ ತೆಕ್ಕಟ್ಟೆ, ರಾಜೇಂದ್ರ ಸುವರ್ಣ, ಬೋಜ ಪೂಜಾರಿ, ವಿವಿಧ ಸಂಘಟನೆಯ ಮುಖಂಡರುಗಳು, ಮುನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಗರಿಕರು ಇದ್ದರು.
ಏನಿದು ಟೋಲ್ ಸಮಸ್ಯೆ…
ಸುರತ್ಕಲ್-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿಯನ್ನು ನವಯುಗ ಕಂಪೆನಿ ಗುತ್ತಿಗೆ ಪಡೆದಿದ್ದು ಪ್ರಮುಖ ಸ್ಥಳಗಳಲ್ಲಿ ಇನ್ನೂ ಕೆಲವು ಕಾಮಗಾರಿ ಬಾಕಿಯಾಗಿದ್ದು ನಿತ್ಯ ಅಪಘಾತ ಅವಘಡಕ್ಕೆ ಕಾರಣವಾಗಿ ವಾಹನ ಸವಾರರು ಹಾಗೂ ನಿತ್ಯ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್, ಉಡುಪಿ ಕರಾವಳಿ ಭಾಗದಲ್ಲಿ ಫ್ಲೈ ಓವರ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹತ್ತು ವರ್ಷದಿಂದ ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ.
ಟೋಲ್ ಸಂಗ್ರಹ ಯಾಕೆ?
ರಾ.ಹೆದ್ದಾರಿ ಸಂಬಂಧಿಸಿದಂತೆ ಟೋಲ್ ಸಂಗ್ರಹ ಮಾಡಲು ಆರಂಭಿಸಿದಿಂದ ಇತ್ತೀಚೆಗೆ 1 ವರ್ಷದ ಅವಧಿಯಲ್ಲಿ ಗುತ್ತಿಗೆ ಕಂಪೆನಿಗೆ 25 ಕೋಟಿ ನಷ್ಟವಾಗಿದೆ. ಎಲ್ಲಾ ವಾಹನಗಳಿಗೂ ಟೋಲ್ ಸಂಗ್ರಹ ಮಾಡಲು ಅವಕಾಶ ಬೇಕೆಂದು ಸಂಬಂಧಿಸಿದ ಗುತ್ತಿಗೆ ಕಂಪೆನಿ ಸರಕಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರೆನ್ನಲಾಗಿದ್ದು ಇದನ್ನು ಪುರಸ್ಕರಿಸಿದ ಅವರು ಡಿಸಿ ಅವರಿಗೆ ಸೂಚಿಸಿದ್ದಾರೆ. ಅದರಂತೆಯೇ ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹಿಸಲು ಸೂಚಿಸಲಾಗಿದೆ ಎನ್ನಲಾಗಿದೆ.
ಬಿಗು ಪೊಲೀಸ್ ಬಂದೋಬಸ್ತ್..
ಟೋಲ್ ಸಂಗ್ರಹಕ್ಕೆ ಮುಂದಾದರೆ ಪ್ರತಿಭಟನೆ ನಡೆಯುವ ಸಾಧ್ಯತೆಗಳನ್ನು ಮನಗೊಂಡಿದ್ದ ಇಲಾಖೆ ಸಾಸ್ತಾನ ಟೋಲ್ ಫ್ಲಾಜಾ ಸಮೀಪ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಉಡುಪಿ ಉಪವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ಸಿಪಿಐ ಶ್ರೀಕಾಂತ್, ವಿವಿಧ ಠಾಣೆಯ ವೃತ್ತ ನಿರೀಕ್ಷಕರು ಮತ್ತು ಸಬ್ ಇನ್ಸ್ಪೆಕ್ಟರ್, 50ಕ್ಕೂ ಅಧಿಕ ಸಿಬ್ಬಂದಿಗಳು ಬಂದೋಬಸ್ತಿನಲ್ಲಿದ್ದರು. ಸ್ಥಳದಲ್ಲಿ ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ವಾಹನವನ್ನು ಇರಿಸಲಾಗಿತ್ತು.
(ಚಿತ್ರ,ವರದಿ ಯೋಗೀಶ್ ಕುಂಭಾಸಿ)
Comments are closed.