
ಮಂಗಳೂರು ಆಗಸ್ಟ್ 14 : ಬಾಲ್ಯ ವಿವಾಹ ಕಾಯ್ದೆ 2006, ಮತ್ತು ಕರ್ನಾಟಕ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) 2016 ಕಾಯ್ದೆಯಂತೆ 18 ವರ್ಷದ ಒಳಗಿನ ಹೆಣ್ಣು ಮತ್ತು 21 ವರ್ಷದ ಒಳಗಿನ ಗಂಡಿನ ನಡುವೆ ನಡೆಯುವ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನ ಒಳಗಿನವರಾಗಿದ್ದರೆ, ಅಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ.
ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆಯಾಗುವವರು, ಅಂತಹ ವಿವಾಹ ಏರ್ಪಡಿಸುವವರು, ಮಗುವಿನ ಹೆತ್ತವರು, ಪೋಷಕರು ಈ ಕಾಯ್ದೆಯನ್ವಯ ತಪ್ಪಿತಸ್ಥರಾಗುತ್ತಾರೆ. ಈ ಅಪರಾಧಕ್ಕಾಗಿ 1 ವರ್ಷಕ್ಕಿಂತ ಕಡಿಮೆಯಿಲ್ಲದ ಮತ್ತು 2 ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಸಜೆ, ಅಥವಾ ರೂ. 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಬಾಲ್ಯವಿವಾಹವು ಅಸಿಂಧು ಎಂದು ಪರಿಗಣಿತವಾಗುತ್ತದೆ.
ಪೊಲೀಸ್ ಅಧಿಕಾರಿಯು ಸ್ವಇಚ್ಚೆಯಿಂದ ದೂರು ದಾಖಲಿಸಬಹುದು, ಸಾಮೂಹಿಕ ವಿವಾಹ ಏರ್ಪಡಿಸುವ ಸಂಘ ಸಂಸ್ಥೆಗಳು ನೋಂದಣಿ ಮಾಡುವುದು ಹಾಗೂ ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ತಾಲ್ಲೂಕು ಮಟ್ಟದಲ್ಲಿ: ತಹಶೀಲ್ದಾರರು, ಕಾರ್ಮಿಕಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ವೈದ್ಯಾಧಿಕಾರಿ, ಸರ್ಕಲ್ ಇನ್ಸ್‍ಪೆಕ್ಟರ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ವಿಸ್ತರಣಾಧಿಕಾರಿಗಳು ಹಿಂದುಳಿದ ವರ್ಗಗಳ ಇಲಾಖೆ. ವಲಯ ಮಟ್ಟದಲ್ಲಿ: ಅಂಗನವಾಡಿ ಮೇಲ್ವಿಚಾರಕಿಯರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹಾಗೂ ಗ್ರಾಮ ಮಟ್ಟದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಕಂದಾಯ ನಿರೀಕ್ಷಕರು, ಹೆಲ್ತ್ ಇನ್ಸ್‍ಪೆಕ್ಟರ್, ಕಾರ್ಮಿಕಾಧಿಕಾರಿ, ಗ್ರಾಮ ಲೆಕ್ಕಿಗರು ಮತ್ತು ಕಂದಾಯಾಧಿಕಾರಿಗಳು ಬಾಲ್ಯವಿವಾಹ ನಿಷೇಧಾಧಿ ಕಾರಿಗಳಾಗಿರುತ್ತಾರೆ. ಬಾಲ್ಯವಿವಾಹದ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Comments are closed.