ಉಡುಪಿ : ನವೆಂಬರ್ 5, 2012 ರಂದು ರಾತ್ರಿ 1 ಗಂಟೆಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಪಝಿಲ್ ಸಾಹೇಬ್ ಎಂಬುವರಿಗೆ ಸೇರಿದ ಕನೆಕ್ಟಿಂಗ್ ಪಾಯಿಂಟ್ ಮೊಬೈಲ್ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿ ಒಟ್ಟು 19000 ರೂ. ಮೌಲ್ಯದ ಏಳು ಮೊಬೈಲ್ ಫೋನ್ ಗಳನ್ನು ಮೂಡುತೋನ್ಸೆ ಗ್ರಾಮದ ವಿಶ್ವನಾಥ, ಕೊಡವೂರು ಗ್ರಾಮದ ಸಂತೋಷ ಬಂಗೇರ ಮತ್ತು ಭಟ್ಕಳದ ಮಹೇಶ ನಾಯಕ ಇವರು ಸೇರಿ ಕಳ್ಳತನ ಮಾಡಿದ್ದು ಅವರಲ್ಲಿ ಆರೋಪಿ ಸಂತೋಷ ಬಂಗೆರಾ ಮೃತಪಟ್ಟಿದ್ದರು.

(ಸಾಂದರ್ಭಿಕ ಚಿತ್ರ)
ಈ ಬಗ್ಗೆ ಉಡುಪಿ ನಗರ ಠಾಣೆಯ ಪೋಲೀಸ್ ಉಪನಿರೀಕ್ಷಕ ಲಿಂಗರಾಜು ಹೆಚ್. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಈ ಪ್ರಕರಣವು ಉಡುಪಿ 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ, ಆರೋಪಿ ವಿರುಧ್ದ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ, ನ್ಯಾಯಾಧೀಶ ಮಂಜುನಾಥ ಎಂ. ಆರೋಪಿಗಳಿಗೆ ಭಾ.ದಂ.ಸಂ ಕಲಂ 457, 380 ರಡಿ 2 ವರ್ಷ ಶಿಕ್ಷೆ ಮತ್ತು ಒಟ್ಟು 2,000 ರೂ. ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಆಂದಿನ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ಭಾಗಶ: ವಿಚಾರಣೆ ನಡೆಸಿದ್ದು ನಂತರ ಈಗಿನ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.