ಕರಾವಳಿ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ : ಪಡುಬಿದ್ರೆಯ ಇಬ್ಬರು ಯುವಕರ ಬಂಧನ

Pinterest LinkedIn Tumblr

ಯುವರಾಜ್ ಕಂಚಿನಡ್ಕ                                            ಗೌರಿ ಲಂಕೇಶ್

ಮಂಗಳೂರು, ಆಗಸ್ಟ್.09: ಹಿರಿಯ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ಪಡುಬಿದ್ರೆಯ ಇಬ್ಬರನ್ನು ಇಂದು ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಸಂದೇಶ್ ಶೆಟ್ಟಿ ಪಾದೆಬೆಟ್ಟು (28) ಹಾಗೂ ಯುವರಾಜ್ ಕಂಚಿನಡ್ಕ (30) ಎಂಬವರನ್ನು ಬಂಧಿಸಿರುವ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ದೃಢಪಡಿಸಿದ್ದಾರೆ

ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಬೆಂಗಳೂರಿನಿಂದ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿಗಳ ತಂಡ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಬ್ಬರನ್ನು ಅವರ ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಸದ್ಯ ಎಸ್‌ಐಟಿ ವಶದಲ್ಲಿರುವ ಇಬ್ಬರನ್ನು ಅಧಿಕಾರಿಗಳು ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದು, ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಆರೋಪದಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

2017ರ ಸೆಪ್ಟೆಂಬರ 5 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ವಗೃಹದ ಬಳಿಯೇ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಂದಿನಿಂದ ಇದುವರೆಗೂ ಸಿಟ್ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಆರೋಪಿಗಳ ಸಹಿತಾ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಸೆಪ್ಟೆಂಬರ್ 5ರ ರಾತ್ರಿ ಗೌರಿ ಲಂಕೇಶ್ ಹತ್ಯೆ ನಡೆದ ಬಳಿಕ ನಗರದ ಸಿಗೇಹಳ್ಳಿಯ ಮನೆಯೊಂದರಲ್ಲಿ ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಸೇರಿದಂತೆ 9ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

Comments are closed.