
ನವದೆಹಲಿ: ಸಲಿಂಗಕಾಮವನ್ನು ನಿರ್ಬಂಧಿಸುವ ಸೆಕ್ಷನ್ 377 ಅನ್ನು ರದ್ದುಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ನ ವಿವೇಚನೆಗೆ ಬಿಟ್ಟಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಇದರ ಬೆನ್ನಿಗೇ, ಸಲಿಂಗ ಕಾಮವನ್ನು ಅಪರಾಧದ ಪಟ್ಟಿಯಿಂದ ಹೊರತರುವ ಮುನ್ಸೂಚನೆಯನ್ನೂ ಸರ್ವೋಚ್ಚ ನ್ಯಾಯಾಲಯ ನೀಡಿದೆ.
” ಸೆಕ್ಷನ್ 377 ಅನ್ನು ರದ್ದುಗೊಳಿಸಿದ್ದೇ ಆದರೆ ಸಾಮಾಜಿಕವಾಗಿ ಮತ್ತು ವೃತ್ತಿಯಲ್ಲಿ ಎಲ್ಜಿಬಿಟಿ (ಪುರುಷ ಮತ್ತು ಸ್ತ್ರೀ ಸಲಿಂಗಿಗಳು, ಉಭಯಲಿಂಗಿಗಳು, ತೃತೀಯಲಿಂಗಿಗಳು ) ಸಮುದಾಯ ಎದುರಿಸುತ್ತಿರುವ ತಾರತಮ್ಯವೂ ಕೊನೆಗೊಳ್ಳಲಿದೆ. ಅಲ್ಲದೆ, ಸಮಾಜದಲ್ಲಿ ಅವರು ಪೂರ್ಣ ಪ್ರಮಾಣದ ಬದುಕು ನಡೆಸಲು ಅವಕಾಶ ಸಿಗಲಿದೆ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಸಲಿಂಗ ಕಾಮವನ್ನು ನಿರ್ಬಂಧಿಸುವ ಸೆಕ್ಷನ್ 377 ಅನ್ನು ರದ್ದುಗೊಳಿಸುವ ಮೂನ್ಸೂಚನೆಯನ್ನೂ ನೀಡಿದೆ.
ಇದಕ್ಕೂ ಮೊದಲು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ಕೇಂದ್ರ ಸರ್ಕಾರ, “ಸೆಕ್ಷನ್ 377ರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯದ ವಿವೇಚನೆಗೇ ಬಿಡಲಾಗಿದೆ,” ಎಂದು ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ನ ಗಮನಕ್ಕೆ ತಂದರು.
“ಇಬ್ಬರು ಪ್ರಾಪ್ತ ವೈಯಸ್ಕರು ಅಸಹಜ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವುದು ಅಪರಾಧ ಎನಿಸಿಕೊಳ್ಳುವುದಿಲ್ಲ. ಇದನ್ನು ನಿರ್ಬಂಧಿಸಲು ಇರುವ ಕಾನೂನನ್ನು ತೊಡೆದು ಹಾಕಿದರೆ ಎಲ್ಜಿಬಿಟಿ ಸಮುದಾಯ ಸಮಾಜದಲ್ಲಿ ನಿರುಮ್ಮಳವಾಗಿ ಬದುಕು ನಡೆಸಲಿದೆ. ಅಲ್ಲದೆ, ಯಾವುದೇ ತೊಡಕಿಲ್ಲದೆ ಚುನಾವಣೆಗಳಲ್ಲಿಯೂ ಸ್ಪರ್ಧಿಸಬಹುದಾಗಿದೆ,” ಎಂದು ಅಭಿಪ್ರಾಯಪಟ್ಟಿತು.
Comments are closed.